

ರಾಯಚೂರು: ತಾಲೂಕಿನ ಶಕ್ತಿನಗರ ಹತ್ತಿರದ ಹದಗೆಟ್ಟಿರುವ ಕೃಷ್ಣಾ ಸೇತುವೆಯ ದುರಸ್ತಿ ಕಾರ್ಯವನ್ನು ಬುಧವಾರ ಬೆಳಗ್ಗೆಯಿಂದ ಆರಂಭಿಸಲಾಗಿದ್ದು, ಸೇತುವೆ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಹೈದರಾಬಾದ್ ನಿಜಾಮರ ಅವಯಲ್ಲಿ ತೆಲಂಗಾಣ ಮತ್ತು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 78 ವರ್ಷಗಳ ಹಿಂದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಹಿಂದೆ ಹಾಕಲಾಗಿದ್ದ ಕಾಂಕ್ರಿಟ್ ವೇರಿಂಗ್ ಕೋಟ್ ಹಾಳಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು.
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಕೊಂಡಿಯಂತೆ ಕೆಲಸ ಮಾಡುತ್ತಿರುವ ಸೇತುವೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಸರಕು ಸಾಗಣೆ ಮತ್ತು ಹಾರೋಬೂದಿ ಟ್ಯಾಂಕರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಸೇತುವೆ ಮೇಲಿನ ಕಾಂಕ್ರಿಟ್ ಹೋಗಿ ಕಬ್ಬಿಣದ ಸರಳುಗಳು ಮೇಲೆ ಬಂದಿದ್ದವು.
ಕಬ್ಬಿಣದ ಸರಳುಗಳು ಮೇಲೆ ಬಂದಿದ್ದರಿಂದ ಅಪಘಾತಗಳು ನಡೆಯುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಿಸುವಂತಾಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಹೊಸದಾಗಿ ಕಾಂಕ್ರಿಟ್ ವೇರಿಂಗ್ ಕೋಟ್ ನಿರ್ಮಾಣಕ್ಕೆ ಮುಂದಾಗಿದೆ.
ಜಿಲ್ಲಾಡಳಿತ ಈಗಾಗಲೇ ಸೇತುವೆ ಮೇಲೆ ಬುಧವಾರದಿಂದ ಮಾ.1ರವರೆಗೆ ಒಟ್ಟು 45 ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದು, ಬುಧವಾರ ಬೆಳಗ್ಗೆಯಿಂದಲೇ ಹದಗೆಟ್ಟಿರುವ ಕಾಂಕ್ರಿಟ್ ವೇರಿಂಗ್ ಕೋಟ್ ತೆಗೆಯುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾರಿಗಳು ಆರಂಭಿಸಿದ್ದಾರೆ.
ಯಂತ್ರಗಳನ್ನು ಬಳಸಿ ಕಾಂಕ್ರಿಟ್ ತೆಗೆಯಲಾಗುತ್ತಿದ್ದು, ಸಂಪೂರ್ಣ ತೆಗೆದಾದ ನಂತರದಲ್ಲಿ ಹೊಸದಾಗಿ ಕಾಂಕ್ರಿಟ್ ವೇರಿಂಗ್ ಕೋಟ್ ಹಾಕುವ ಕೆಲಸವನ್ನು ಆರಂಭಿಸಲಾಗುತ್ತಿದೆ. ಒಟ್ಟಾರೆ 45 ದಿನಗಳ ಕಾಲ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಲ್ಲಿಸಲಾಗುತ್ತಿದೆ.