

ಮಡಿಕೇರಿ:
ಭೂಕುಸಿತದ ಸಂಭವನೀಯ ಪ್ರದೇಶಗಳ ಬಗ್ಗೆ ಭೂವಿಜ್ಞಾನ ಇಲಾಖೆಯ ಪರಿಣಿತರು ನೀಡುವ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಕಂದಾಯ ಇಲಾಖೆಯಿಂದ ಇದಕ್ಕಾಗಿ 20 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಜಿಲ್ಲೆಯ ಮಳೆಹಾನಿ ಪೀಡಿತ ಪ್ರದೇಶಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ ನಂತರ ಮಡಿಕೇರಿಯಲ್ಲಿ ಜಿಲ್ಲೆಯ ಉನ್ನತಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆಗಾಲದಲ್ಲಿ ವಿಕೋಪ ಸಂದರ್ಭ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸೂಚಿಸಿದರು. ಕಾವೇರಿ ಕಣಿವೆ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದೆ. ರಾಜ್ಯದ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ. ಈಗಾಗಲೇ ಶೇ. 50 ರಷ್ಟು ಜಲಾಶಯಗಳು ಭರ್ತಿಯಾಗಿದೆ. ಒಳಹರಿವು ಉತ್ತಮವಾಗಿದೆ. ಮಳೆ, ನದಿ ಪ್ರವಾಹದಿಂದಾಗಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಈ ಬಾರಿ ವ್ಯಾಪಕವಾದ ಹಾನಿ ಕೊಡಗಿನಲ್ಲಿ ಸಂಭವಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಜತೆ ಕೊಡಗಿನ ಹಲವೆಡೆ ತೆರಳಿ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಅಧಿಕಾರಿಗಳು ತಳಮಟ್ಟದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಎಲ್ಲ ಹಂತದಲ್ಲಿಯೂ ಕೊಡಗಿನಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಎನ್ ಡಿಆರ್.ಎಫ್. ತಂಡ ಮುನ್ನೆಚ್ಚರಿಕೆಯಿಂದ ಇದೆ ಎಂದರು.
ಸೆಸ್ಕ್ ಸಿಬ್ಬಂದಿ ಕೆಲವೆಡೆ ವಿದ್ಯುತ್ ಸಂಪರ್ಕಕ್ಕೆ ವಿಳಂಬ ಮಾಡಿರುವ ಬಗ್ಗೆ ದೂರುಗಳು ಬಂದಿದೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ವಿದ್ಯುತ್ ಸಂಪರ್ಕ ಸಮಸ್ಯೆ ತಪ್ಪಿಸಬೇಕು. ಕೆಲವು ಕಾಮಗಾರಿಗಳಿಗೆ ಮೀಸಲಾದ ಅನುದಾನ ವಿನಿಯೋಗವಾಗದೇ ಇದ್ದ ಪ್ರಕರಣಗಳಲ್ಲಿ ಕೂಡಲೇ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಅನುದಾನವನ್ನು ಬೇರೆ ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಸೂಚಿಸಿದರು.
ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ 540 ಕೋಟಿ ರು.ಗಳಷ್ಟು ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು.
ಹಣಕಾಸಿನ ಕೊರತೆಯಾಗದಂತೆ ಗಮನ ಹರಿಸಿ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಸೂಚಿಸಿದ ಮೇರೆಗೆ ಕೊಡಗಿಗೆ ಭೇಟಿ ನೀಡಿರುವೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಚುರುಕುಗೊಳಿಸುವ ಪ್ರಯತ್ನವನ್ನು ಸಚಿವ ಬೋಸರಾಜ್ ಮತ್ತು ಶಾಸಕದ್ವಯರ ಸಹಕಾರದೊಂದಿಗೆ ಮಾಡಲಾಗಿದೆ. ಕೊಡಗಿನ ಜನತೆಗೆ ಮಳೆಗಹಾನಿ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್, ಶಾಸಕ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಇದ್ದರು.