

ಉಡುಪಿ: ಕೃಷ್ಣಾಷ್ಟಮಿ ಅಂಗವಾಗಿ ಈ ಬಾರಿಯೂ ವಿಶಿಷ್ಟ ವೇಷ ಧರಿಸಿ ಬಡಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲಾಗುವುದು. ಇಂಗ್ಲಿಷ್ ಸಿನೆಮಾ ಸಿ ಫೋಕ್ ಪಾತ್ರಧಾರಿಯ ವೇಷ ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವೇಷಧಾರಿ ರವಿ ಕಟಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 8 ವರ್ಷಗಳಲ್ಲಿ ವೇಷಧರಿಸಿ ಸಂಗ್ರಹಿಸಿದ 1.13 ಕೋಟಿ ರೂ.ಗಳನ್ನು 113 ಮಕ್ಕಳ ಚಿಕಿತ್ಸೆಗೆ ವಿತರಿಸಲಾಗಿದೆ. ಈ ಬಾರಿ ಯಾವುದೇ ಡಬ್ಬಗಳನ್ನು ಇಟ್ಟುಕೊಂಡು ಅಂಗಡಿಗಳಿಗೆ ಹೋಗುವುದಿಲ್ಲ. ವೈಯಕ್ತಿಕವಾಗಿ ನೀಡುವ ಹಣ ತೆಗೆದುಕೊಳ್ಳುತ್ತೇವೆ. ಇದನ್ನು ಹೃದಯದ ತೊಂದರೆಯಿಂದ ಬಳಲುತ್ತಿರುವ ಕುಂದಾಪುರದ 2 ವರ್ಷದ ಮಗುವಿನ ಚಿಕಿತ್ಸೆಗೆ ನೀಡಲಾಗುವುದು ಎಂದರು.
ಅಪವಾದ ಭೀತಿ
ಸರ್ಕಾರ ನೀಡಿದ 2.75 ಸೆಂಟ್ಸ್ ಜಾಗದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೇನೆ. ಕೆಲವರು ವೇಷದ ದುಡ್ಡಿನಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬುದಾಗಿ ವಿನಾ ಕಾರಣ ಅಪಾದನೆ ಮಾಡಿದ್ದರು. ಇದರಿಂದ ಮನನೊಂದು ಈ ಬಾರಿ ವೇಷ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೆ. ನನ್ನ ಸನ್ಮಾನದ ಹಣವನ್ನೂ ದಾನ ಮಾಡಿದ್ದೇನೆ. ಇದರಿಂದಾಗಿ ಈ ಬಾರಿ ಹೆಚ್ಚು ಕಲೆಕ್ಷನ್ ಮಾಡುವುದಿಲ್ಲ. ಒಂದೇ ಮಗುವಿಗೆ ನೆರವು ನೀಡುತ್ತಿದ್ದೇನೆ ಎಂದು ಹೇಳಿದರು. ರವಿ ಕಟಪಾಡಿ ತಂಡದ ಕೆ. ಮಹೇಶ್ ಶೆಣೈ, ವಿಶ್ವಾಸ್, ಮೊಹಮ್ಮದ್ ರಝೀಯುಲ್ಲಾ ಉಪಸ್ಥಿತರಿದ್ದರು,