ಧರ್ಮ ರಕ್ಷಿಸುವ ಕೆಲಸ ಅಗತ್ಯ: ಜಯಪ್ರಕಾಶ್​ ಹೆಗ್ಡೆ

Shree Krishna Jayanthi 2
Published on

ಉಡುಪಿ : ಶ್ರೀಕೃಷ್ಣ ಮಠ ಹಾಗೂ ಕನಕನ ಕಿಂಡಿಯಿಂದಾಗಿ ಉಡುಪಿ ಜಿಲ್ಲೆಯು ವಿಶ್ವವ್ಯಾಪಿ ಹೆಸರುವಾಸಿಯಾಗಿದೆ. ಕನಕದಾಸರ ಕೀರ್ತನೆಯಲ್ಲಿರುವ ಸಾರದಂತೆ ಸಮಾಜದಲ್ಲಿ ನಾಗರೀಕರು ಕುಲ-ಕುಲವೆಂದು ಹೊಡೆದಾಡದೇ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿ ಬಾಳಬೇಕು. ಧರ್ಮವನ್ನು ರಕ್ಷಣೆ ಮಾಡುವ ಕೆಲಸವಾಗಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್​ ಹೆಗ್ಡೆ ಹೇಳಿದರು.


ಬುಧವಾರ ನಗರದ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.


ಕೃಷ್ಣನ ಸಂದೇಶಗಳ ಆಕರ್ಷಣೆಗೆ ಒಳಗಾಗಿ ದೇಶ-ವಿದೇಶಗಳಲ್ಲಿ ಸಾಕಷ್ಟು ಮಂದಿ ಶ್ರೀಕೃಷ್ಣನ ಭಕ್ತರಿದ್ದಾರೆ. ಮಕ್ಕಳಿಗೆ ಭೂತ, ವರ್ತಮಾನ ಹಾಗೂ ಭವಿಷ್ಯತ್​ ಕಾಲದ ವಸ್ತು ಸ್ಥಿತಿಗಳ ಕುರಿತು ತಿಳಿ ಹೇಳಬೇಕು. ಶಾಲೆಯು ಮಕ್ಕಳಿಗೆ ಶಿಕ್ಷಣ ನೀಡಿದರೆ, ಸಂಸ್ಕಾರವನ್ನು ಪೋಷಕರು ಕಲಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್​ಪಾಲ್​ ಎ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ಶ್ರೀಕೃಷ್ಣ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ವಿವಿಧೆಡೆ ಸಂಘ-ಸಂಸ್ಥೆಗಳು, ಮಠ-ಮಂದಿರಗಳು, ಭಜನಾ ಮಂಡಳಿಗಳು ತಂಡಗಳನ್ನು ರಚಿಸಿ, ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮುದ್ದು ರಾಧೆ ಸ್ಪರ್ಧೆ ಹಾಗೂ ಜಿಲ್ಲೆಯ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷದಾರಿಯವರು ಮಾಡುವ ಹುಲಿ ಕುಣಿತಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಮಕ್ಕಳಿಗೆ ಹುಲಿ ಕುಣಿತ ಸ್ಫರ್ದೆಯನ್ನು ಆಯೋಜಿಸಲು ಕ್ರಮವಹಿಸಿದ್ದಲ್ಲಿ, ಅಗತ್ಯ ಸಹಕಾರ ನೀಡಲಾಗುವುದು ಎಂದರು.


ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​ ಮಾತನಾಡಿ, ಶ್ರೀಕೃಷ್ಣನು ಪ್ರತಿಯೊಂದು ಕಾಲಘಟ್ಟದಲ್ಲಿ ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ. ಕೃಷ್ಣನ ಸಂದೇಶಗಳನ್ನು ಆಧುನಿಕ ಜೀವನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಅಳವಡಿಸಿಕೊಂಡಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ವಿಶ್ವಕ್ಕೆ ಪ್ರಸ್ತುತ ಎಂದರು.


ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪನ್ಯಾಸ ನೀಡಿದರು. ಪಾಡಿಗಾರ್​ ಲಕ್ಷ್ಮಿ ನಾರಾಯಣ ಉಪಾಧ್ಯ ಮತು ಬಳಗದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮುದ್ದುಕೃಷ್ಣ ವೇಷದ ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ದರ್ಪಣ ಮಹಿಳಾ ಹುಲಿ ತಂಡದವರು ಹುಲಿ ಕುಣಿತ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ನಗರಸಭೆ ಸದಸ್ಯೆ ರಜನಿ ಹೆಬ್ಬಾರ್​, ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್​, ಶಾಲೆಯ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ಉಪನ್ಯಾಸಕ ರಾಮಾಂಜಿ ನಿರೂಪಿಸಿದರೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net