ಮೈದುಂಬಿ ಹರಿಯುತ್ತಿವೆ ಕೃಷ್ಣೇ,ತುಂಗೇ ! ನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹ ಭೀತಿ

raichur
raichur
Published on

ರಾಯಚೂರು ಮಲೆನಾಡು ಹಾಗೂ ಮಹಾರಾಷ್ಟ್ರ ಭಾಗದ ವಿವಿಧ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹಾಗೂ 1.30 ಲಕ್ಷ ಕ್ಯೂಸೆಕ್ ಹಾಗೂ ನಾರಾಯಣಪುರು ಜಲಾಶಯದಿಂದ ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟಿರುವುದರಿಂದ ನದಿ ಪಾತ್ರದ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಜಿಲ್ಲೆಯು ಎರಡು ನದಿಗಳನ್ನು ಒಳಗೊಂಡ ದೊಹಬ್ ಪ್ರದೇಶ ಎಂದೇ ಗುರುತ್ತಿಸಿಕೊಂಡಿದೆ. ನದಿ ಪಾತ್ರದ ಗ್ರಾಮಗಳಿಗೆ ಪ್ರತಿ ವರ್ಷ ಪ್ರವಾಹ ಭೀತಿ ಎದುರಾಗುತ್ತಿರುವುದು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮಕ್ಕಿದ್ದರು, ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನದಿಪಾತ್ರದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಎರಡು ನದಿಗಳ ದಡದಲ್ಲಿ ಎಷ್ಟು ಗ್ರಾಮಗಳು?

ಕೃಷ್ಣಾ ನದಿಯು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಒಟ್ಟು 72 ಗ್ರಾಮಗಳು ದಡದಲ್ಲಿ ಬರುತ್ತಿದ್ದು, ಈ ಪೈಕಿ ಲಿಂಗಸೂಗೂರು ತಾಲೂಕಿನ 13 ಗ್ರಾಮಗಳಿಗೆ,ದೇವದುರ್ಗ ತಾಲೂಕಿನ 42 ಗ್ರಾಮಗಳಿಗೆ ಕೃಷ್ಣಾ ನದಿಯಿಂದ 4.5ರಿಂದ 7 ಲಕ್ಷ ಕ್ಯೂಸೆಕ್ ನೀರು ಬಂದರೆ ಪ್ರವಾಹ ಭೀತಿ ಎದುರಾಗುತ್ತದೆ. ಆದರಂತೆ ರಾಯಚೂರು ತಾಲೂಕಿನ 17 ಗ್ರಾಮಗಳಿಗೆ 6 ರಿಂದ 7 ಲಕ್ಷ ಕ್ಯೂಸೆಕ್ ನೀರು ಬಂದರೆ ಪ್ರವಾಹ ಭೀತಿ ಎದುರಾಗುತ್ತದೆ.

ತುಂಗಭದ್ರಾ ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟರೆ ಜಿಲ್ಲೆಯ 33 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಈ ಪೈಕಿ ಸಿಂಧನೂರು ತಾಲೂಕಿನಲ್ಲಿ 13 ಗ್ರಾಮಗಳು,ಮಾನ್ವಿ ತಾಲೂಕಿನಲ್ಲಿ 11 ಗ್ರಾಮಗಳು ಹಾಗೂ ರಾಯಚೂರು ತಾಲೂಕಿನಲ್ಲಿ 9 ಗ್ರಾಮಗಳಿಗೆ ನದಿಯಿಂದ 3 ರಿಂದ 5 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಪ್ರವಾಹ ಭೀತಿ ಎದುರಾಗುತ್ತದೆ.

ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬೀಳುತ್ತಿರುವುದರಿಂದ ಜಲಾಶಯಗಳು ಭರ್ತಿ ಆಗಿ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚುತ್ತ ಸಾಗಿದೆ. ದಿನದಿಂದ ದಿನಕ್ಕೆ ಕೃಷ್ಣಾ ನದಿ ಪ್ರವಾಹ ಹೆಚ್ಚುತ್ತಿದ್ದು, ಜನರಲ್ಲಿ ಭೀತಿ ಉಂಟಾಗಿದೆ. ನದಿ ತಟದ ಪ್ರದೇಶದಲ್ಲಿ ಅಪಾರ ಬೆಳೆ ಜಲಾವೃತಗೊಂಡು ನಷ್ಟ ಸಂಭವಿಸಿದೆ. ಈಗಾಗಲೇ ಲಿಂಗಸುಗೂರಿನ ಶೀಹಳ್ಳಿ, ದೇವದುರ್ಗದ ಹೂವಿನಹಡಗಿ ಸೇತುವೆಗಳು ಮುಳುಗಡೆಯಾಗಿದ್ದು,ಗುರ್ಜಾಪುರ ಸೇತುವೆ ಮುಳುಗುವ ಹಂತದಲ್ಲಿದೆ. ಕರಡಕಲಗಡ್ಡಿ, ಮ್ಯಾದರಗಡ್ಡಿ, ವೆಂಕಮ್ಮನಗಡ್ಡಿ ಪ್ರದೇಶ ಸಂಪೂರ್ಣ ಬಾಹ್ಯ ಸಂಪರ್ಕ ಕಳೆದುಕೊಂಡಿವೆ.

ಕೆಲ ನಡುಗಡ್ಡೆ ಗ್ರಾಮಗಳ ಜನ ಸುತ್ತುವರೆದು ಬಾಹ್ಯ ಸಂಪರ್ಕ ಸಾಧಿಸುತ್ತಿದ್ದಾರೆ. ಇನ್ನೊಂದಡೆ ಶೀಲಹಳ್ಳಿ, ತವದಗಡ್ಡಿ, ಗೋನವಾಟ್ಲ, ಗುಂತಗೋಳ, ಗದ್ದಗಿ, ಕಡ್ಲೂರು,ಗುರ್ಜಾಪುರ, ಹರಿಶಿಣಗಿ ಸೇರಿದಂತೆ ನದಿ ತಟದ ದೊಡ್ಡಿಗಳ ನೂರಾರು ಎಕರೆ ಜಮೀನದಲ್ಲಿ ಬೆಳೆದು ನಿಂತ ತೊಗರಿ, ಹೆಸರು, ಸಜ್ಜೆ, ರೇಷ್ಮೆ ಬೆಳೆ, ದಾಳಿಂಬೆ ಸೇರಿದಂತೆ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳು ಜಲವೃತಗೊಂಡಿವೆ.

ರಾಯರ ಏಕಶಿಲಾ ವೃಂದಾವನ ಜಲಾವೃತ

ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿರುವ ಬಿಚ್ಚಾಲೆಯಲ್ಲಿರುವ ರಾಯರ ಏಕಶಿಲಾ ವೃಂದಾವನ ತುಂಗಭದ್ರಾ ನದಿ ಪ್ರವಾಹಕ್ಕೆ ಜಲಾವೃತವಾಗಿದ್ದು, ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಬಿಚ್ಚಾಲಮ್ಮ ದೇವಿ ದೇವಾಲಯ ಬಳಿಯ ರಾಯರ ವೃಂದಾವನಕ್ಕೆ ನೀರು ನುಗ್ಗಿದೆ. ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಟ ನಡೆಸಿದ್ದಾರೆ. ರಾಯರ ವೃಂದಾವನಕ್ಕೆ ನೀರಿನಲ್ಲೇ ತೆರಳಿ ಅರ್ಚಕರು ಪೂಜೆ, ಅಭಿಷೇಕ ಮಾಡಲು ಸಾಹಸಪಡುತ್ತಿದ್ದಾರೆ. ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ವೃಂದಾವನ ಈಗ ಜಲಾವೃತವಾಗಿದೆ. ಎಲೆಬಿಚ್ಚಾಲಿಯ ಬಿಚ್ಚಾಲಮ್ಮ ದೇವಾಲಯ ಸುತ್ತಲೂ ನೀರು ಆವರಿಸಿದೆ. ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಜಲಾವೃತವಾಗಿದ್ದು ಮುಳುಗಡೆ ಹಂತದಲ್ಲಿದ್ದು ಆರ್ಚಕರಿಗೆ ಭಯದ ವಾತವರಣ ನಿರ್ಮಾಣವಾಗಿದೆ.

ಎರಡು ನದಿಗಳ ನೀರಿನ ಮಟ್ಟ

ಪ್ರಸ್ತುತ ನಾರಾಯಣಪುರ ಜಲಾಶಯದಿಂದ ಕೃಷ್ಟಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಒಳ ಹರಿವು 2.50ಲಕ್ಷ ಕ್ಯೂಸೆಕ್, ಹೊರ ಹರಿವು 2.60 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಆದರಂತೆ ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 1.30 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಒಳ ಹರಿವು 1.28 ಲಕ್ಷ ಕ್ಯೂಸೆಕ್ ಇದ್ದು, ಹೊರ ಹರಿವು 1.30 ಕ್ಸೂಸೆಕ್ ನೀರು ಇದೆ.

ತುಂಗಭದ್ರಾ ಹಾಗೂ ಕಷ್ಣಾ ನದಿಗಳಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಅಗಮಿಸಿದ್ದು, ಪ್ರವಾಹದ ವೇಳೆ ನದಿ ಪಾತ್ರದ ಜನರ ರಕ್ಷಣೆಗೆ ಮತ್ತು ಪರಿಸ್ಥಿತಿಯನ್ನು ನೀಭಾಯಿಸಲು ಈ ತಂಡಗಳು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಮಲೆನಾಡು ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ತುಂಗಾಭದ್ರ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಭೀತಿಯನ್ನು ಎದುರಿಸಲು ಜಿಲ್ಲಾಡಳಿತದಿಂದ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಂಡಗಳಲ್ಲಿ ರಚಿಸಲಾಗಿದ್ದು, ನಡುಗಡ್ಡೆ ಪ್ರದೇಶದ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ನಿತೀಶ್ ಕೆ., ಜಿಲ್ಲಾಧಿಕಾರಿ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net