

ಉಡುಪಿ: ರೈತರು ಕೃಷಿ ಭೂಮಿಯ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಕರೆ ಮಾಡುವುದು, ಅಧಿಕಾರಿಗಳನ್ನು ಹುಡುಕಿಕೊಂಡು ಕೃಷಿ ಇಲಾಖೆ ಕಚೇರಿಗೆ ತೆರಳುವುದು, ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿರುವುದು... ಇತ್ಯಾದಿ ಸಮಸ್ಯೆಗಳಿಗೆ ಕೃಷಿ ಸಂಜೀವಿನಿ ಪರಿಹಾರ ರೂಪದಲ್ಲಿ ರೈತನ ಮನೆ ಬಾಗಿಲಿಗೆ ಬರಲಿದೆ.
ಕೃಷಿ ಸಂಜೀವಿನಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆಗೆ ರೈತರು ಕರೆ ಮಾಡಿದರೆ ಅಧಿಕಾರಿಗಳು, ಸಿಬ್ಬಂದಿ ಜಮೀನಿಗೆ ಬಂದು, ಕೃಷಿ ಸಂಬಂಧಿತ ಸಲಹೆ, ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಕೀಟ ನಿಯಂತ್ರಣ, ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ, ಮಣ್ಣು ಪರೀಕ್ಷೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ಜಮೀನುಗಳಲ್ಲಿ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರ ಅನುಷ್ಠಾನಗೊಳಿಸಿದ್ದು, ಜಿಲ್ಲೆಗೂ ಕೃಷಿ ಸಂಜೀವಿನಿ ಬಂದಿದೆ.
ಸಹಾಯವಾಣಿ
ಕೃಷಿ ಸಂಜೀವಿನಿ ಸಹಾಯವಾಣಿ 155313 ಸಂಖ್ಯೆಯು ಟೋಲ್ ಫ್ರೀ ಸಹಾಯವಾಣಿಯಾಗಿದ್ದು, ಮೊಬೈಲ್‌ನಿಂದ ಹಾಗೂ ಸ್ಥಿರ ದೂರವಾಣಿಯಿಂದ ಕರೆ ಮಾಡಬಹುದು. ಜಿಲ್ಲೆಯ ಯಾವುದೇ ಸ್ಥಳದಿಂದ ಕರೆ ಮಾಡಿದಲ್ಲಿ, ಅದು ಕೃಷಿ ಇಲಾಖೆಯ ಬೆಂಗಳೂರು ಕಚೇರಿಗೆ ಹೋಗಲಿದ್ದು, ಅಲ್ಲಿಂದ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ತಲುಪಲಿದೆ. ಅಲ್ಲಿಂದ ಜಿಲ್ಲೆಯಲ್ಲಿರುವ ಕೃಷಿ ಸಂಜೀವಿನಿ ವಾಹನಕ್ಕೆ, ಕರೆ ಮಾಡಿದ ರೈತರ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ರವಾನೆಯಾಗುತ್ತದೆ. ನಂತರ ಅಧಿಕಾರಿಗಳು ರೈತರ ವಿಳಾಸಕ್ಕೆ ತೆರಳಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ.
ಮಣ್ಣು ಪರೀಕ್ಷೆ ಯಂತ್ರ
ವಾಹನವು ಮಿನಿ ಸಂಚಾರಿ ಲ್ಯಾಬ್ ರೀತಿ ಕಾರ್ಯ ನಿರ್ವಹಿಸುತ್ತದೆ. ಮಣ್ಣು ಪರೀಕ್ಷೆ ನಡೆಸುವ ಯಂತ್ರ ಸೇರಿದಂತೆ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ. ಸಮಸ್ಯೆ ಕುರಿತು ಕರೆ ಮಾಡುವ ರೈತರ ಜಮೀನಿಗೆ ತೆರಳಲಿರುವ ವಾಹನದಲ್ಲಿ ಕೃಷಿ ಡಿಪ್ಲೊಮಾ ಪಡೆದ ಸಿಬ್ಬಂದಿ, ಆ ವ್ಯಾಪ್ತಿಯ ಕೃಷಿ ಇಲಾಖೆ ಅಧಿಕಾರಿಗಳು ಇರುತ್ತಾರೆ. ರೈತರಿಗೆ ಅವರ ಸ್ಥಳದಲ್ಲೇ ಮಣ್ಣಿನ ಅರೋಗ್ಯ ಸಂಬಂಧಿತ ಸಮಸ್ಯೆಯ ಪರೀಕ್ಷೆ ನಡೆಸುವುದು ಸೇರಿದಂತೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಸಲಹೆ ನೀಡಲಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್.
ಕೃಷಿ ಸಂಜೀವಿನಿ ಮೂಲಕ, ಬೆಳೆಯ ಎಲ್ಲ ಹಂತಗಳಲ್ಲಿ ಕಂಡು ಬರಬಹುದಾದ ಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ಸಕಾಲದಲ್ಲಿ ತಿಳಿಸುವುದು ಪ್ರಮುಖ ಉದ್ದೇಶ. ಜಿಲ್ಲೆಯ ರೈತರು ಕೃಷಿ ಸಂಜೀವಿನಿಯ ಪ್ರಯೋಜನ ಪಡೆಯುವುದರ ಮೂಲಕ ತಮ್ಮ ಜಮೀನುಗಳಲ್ಲಿ ಇರುವ ಕೃಷಿ ಸಂಬಂದಿತ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಾಗಲಿದೆ.
ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ