

ಪಡುಬಿದ್ರಿ: ಕಾಲ ಕಾಲಕ್ಕೆ ಮಳೆ -ಬೆಳೆ ಉತ್ತಮವಾಗಲು ಅರಣ್ಯ ಬೆಳೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿಗೆ ಹೆಚ್ಚು ಪ್ರಧಾನ್ಯತೆ ನೀಡುತ್ತಿದ್ದು, ರೈತರು ಕೃಷಿ ಇಲಾಖೆಯಿಂದ ನಡೆಯುವ ತರಬೇತಿ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯೆ ಶಿಲ್ಪಾ ಜಿ. ಸುವರ್ಣ ಸಲಹೆ ನೀಡಿದರು.
ಜಿಪಂ ಕೃಷಿ ಇಲಾಖೆ, ಆತ್ಮ ಅನುಷ್ಠಾನ ಸಮಿತಿ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ಹಾಗೂ ಎಲ್ಲೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸಹಯೋಗದಲ್ಲಿ ಎಲ್ಲೂರಿನಲ್ಲಿ ಗುರುವಾರ ಆಯೋಜಿಸಿದ್ದ 2020-21ನೇ ಸಾಲಿನ ಆತ್ಮ ಯೋಜನೆಯಂತೆ ವೈಜ್ಞಾನಿಕ ರೀತಿಯಲ್ಲಿ ಅರಣ್ಯ ಕೃಷಿ ಪದ್ಧತಿ ತಾಂತ್ರಿಕ ಮಾಹಿತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಅರಣ್ಯ ಉಡುಪಿ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ ಶ್ರೀಗಂಧ, ಸಾಗುವಾನಿ, ಬಿದಿರು, ತೇಗ ಕೃಷಿ ಬಗ್ಗೆ ಹಾಗೂ ಅರಣ್ಯ ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ಕೃಷಿ ಅಧಿಕಾರಿ ರಾಘವೇಂದ್ರ ಆಚಾರ್ಯ, ತಾಪಂ ಸದಸ್ಯ ಕೇಶವ ಮೊಯ್ಲಿ, ಉಡುಪಿ ಅಕ್ಷಯಾಮೃತ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು, ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅರುಣ್ ಕುಮಾರ್, ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಶಿರ್ವ, ಎಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಸೀತಾರಾಮ ರಾವ್ ಎಲ್ಲೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಬಿದ್ರಿ ವಲಯ ಮೇಲ್ವಿಚಾರಕ ರತ್ನಾಕರ ಕೊಠಾರಿ ಉಪಸ್ಥಿತರಿದ್ದರು. ಯೋಜನೆ ಸೇವಾ ಪ್ರತಿನಿಧಿ ಉಷಾ ದಯಾನಂದ ನಿರೂಪಿಸಿದರು.