21ರಿಂದ ಮೈಸೂರಿನಲ್ಲಿ ಕೃಷಿ ಮೇಳ; ಸುಸ್ಥಿರ ಕೃಷಿ ಅಭಿವೃದ್ಧಿಯತ್ತ ನೋಟ, ಬಾಬಾ ರಾಮದೇವ್ ಅವರಿಂದ ಲಾಂಛನ ಬಿಡುಗಡೆ

KRISHI MELA
Published on

ಮೈಸೂರು: ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಅನ್ನದಾತನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24x7 ಸುದ್ದಿವಾಹಿನಿ ಮೈಸೂರಿನಲ್ಲಿ ಇದೇ ಫೆ. 21ರಿಂದ 23ರವರೆಗೆ ಮೂರು ದಿನಗಳ ಕೃಷಿ ಮೇಳ ಆಯೋಜಿಸಿವೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಮೇಳವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕೃಷಿ ಮೇಳದ ಲಾಂಛನವನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಲೋಕಾರ್ಪಣೆ ಮಾಡಿದರು.

ಸುಸ್ಥಿರ ಕೃಷಿ ಅಭಿವೃದ್ಧಿಯತ್ತ ನೋಟ ಮೇಳದ ಧ್ಯೇಯವಾಕ್ಯವಾಗಿದೆ. ಮೂರು ದಿನಗಳ ಕಾಲ ನಾಡಿನ ಕೃಷಿ ಸಂಸ್ಕೃತಿಯನ್ನು ಕಟ್ಟಿಕೊಡುವ ಈ ಮೇಳದಲ್ಲಿ ನಾಡಿನ ಮೂಲೆಮೂಲೆಯ ಸಹಸ್ರಾರು ರೈತರು, ಕೃಷಿ ಸಾಧಕರು, ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ, ವಿವಿಧ ಇಲಾಖೆಗಳ ಸಚಿವರು, ಶಾಸಕರು, ಸಂಸದರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕೃಷಿಕರಿಗೆ ಶುಭ

ಹಾರೈಸಲು ಕನ್ನಡ ಚಲನಚಿತ್ರರಂಗದ ಹಲವು ನಾಯಕ ನಟರು, ಕಲಾವಿದರು ಆಗಮಿಸಲಿದ್ದಾರೆ. ದೇಸೀ ಕ್ರೀಡೆ: ಹೊಲಗದ್ದೆಗಳಲ್ಲಿ ಕಾಯಕದಲ್ಲೇ ಕಳೆದುಹೋಗಿರುವ ಕೃಷಿಕರಿಗೆ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ.

ರೈತರಿಗಾಗಿ ಒಂಟಿಕಾಲಿನ ಓಟ, ಗೋಣಿಚೀಲದ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಆಟ ಹಮ್ಮಿಕೊಂಡಿದ್ದರೆ, ಮಹಿಳಾ ಕೃಷಿಕರಿಗಾಗಿ ಭತ್ತ ಕುಟ್ಟುವುದು, ರಾಗಿ ಕೇರುವುದು, ನೀರಿನ ಬಿಂದಿಯೊಂದಿಗೆ ಓಟ ಇನ್ನಿತರ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಇದು ಕೃಷಿಕರಿಗೆ ಭರಪೂರ ಮನರಂಜನೆ ನೀಡಲಿದೆ. ಅಷ್ಟೇ ಅಲ್ಲದೆ, ಕರುಗಳ ಪ್ರದರ್ಶನ ವಿಶೇಷವಾಗಿ ಇರಲಿದ್ದು, ಮೀನುಗಳ ಪ್ರದರ್ಶನ, ಪಶುಸಂಗೋಪನೆ ಕ್ಷೇತ್ರದ ಹೊಸ ತಳಿಗಳ ಪ್ರದರ್ಶನವೂ ಇರಲಿದೆ.

ಆಧುನಿಕತೆಯ ಭರಾಟೆಯಲ್ಲಿ ಕೃಷಿ ಹಾಗೂ ಕೃಷಿಕರ ಬದುಕು ದುಸ್ತರವಾಗುತ್ತಿದೆ. ಬೇಸಾಯ ಎಂಬುದು ‘ಮಾನ್ಸೂನ್ ಜೊತೆಗಿನ ಜೂಜಾಟ’ ಎಂಬ ಹಳೆಯ ಮಾತು ಇನ್ನೂ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಬದುಕು ಸುಸ್ಥಿರವಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬೇಸಾಯ ಮಾಡುವುದು ಹೆಮ್ಮೆಯ ವಿಷಯವಾಗುವಂತೆ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಬೇಸಾಯ ಕ್ರಮ, ನೀರಾವರಿ ನಿರ್ವಹಣೆ, ತಂತ್ರಜ್ಞಾನದ ಸೂಕ್ತ ಬಳಕೆ, ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳುವುದೂ ಸೇರಿ ರೈತರನ್ನು ಹದಗೊಳಿಸುವ ಕೆಲಸ ಈಗ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ಮೇಳವನ್ನು ಅರ್ಥಪೂರ್ಣವಾಗಿ ಮಾಡುವ ಪ್ರಯತ್ನ ಇದಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದವರು, ವಿವಿಧ ಕ್ಷೇತ್ರದವರು ನೆರವು-ಸಹಕಾರ ನೀಡುವ ಮೂಲಕ ಮೇಳವನ್ನು ಯಶಸ್ವಿಗೊಳಿಸಲು ಹೆಗಲುಕೊಟ್ಟಿದ್ದಾರೆ. ಸಾರ್ವಜನಿಕರು, ರೈತರು ಈ ಮೇಳದಲ್ಲಿ ಮುಕ್ತವಾಗಿ ಪಾಲ್ಗೊಂಡು ಕೃಷಿ ಕಲೆ, ಗ್ರಾಮ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಲಾಂಛನ ಅನಾವರಣ

ವಿಜಯವಾಣಿ, ದಿಗ್ವಿಜಯ ನ್ಯೂಸ್ 24x7 ಕೃಷಿ ಮೇಳದ ಲಾಂಛನವನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಯೋಗ ಗುರು ಬಾಬಾ ರಾಮದೇವ್ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅನಾವರಣಗೊಳಿಸಿದರು. ರೈತ ಮುಖಂಡರಾದ ಗುರು ರಾಯನಗೌಡರ, ಮಹದೇವಪ್ಪ ಎಂ. ಹುಲ್ಲೂರ, ಗಂಗಪ್ಪ ಕುಸುಗಲ್ಲ, ಕಲಬುರಗಿಯ ಉದ್ಯಮಿ ಚಂದು ಪಾಟೀಲ ಉಪಸ್ಥಿತರಿದ್ದರು.

ಮೇಳದಲ್ಲಿ ಏನೇನಿರುತ್ತವೆ?

ಮೇಳದಲ್ಲಿ ಕೃಷಿ ಲೋಕದ ಆಗುಹೋಗುಗಳ ಕುರಿತು ವಿಷಯ ತಜ್ಞರು, ಪರಿಣತರು, ರೈತ ಮುಖಂಡರು ವಿಚಾರ ಮಂಡಿಸಲಿದ್ದಾರೆ. ಕೃಷಿರಂಗದಲ್ಲಿ ಆಗಿರುವ ಬದಲಾವಣೆಗಳು, ಬೆಳವಣಿಗೆಯನ್ನು ಪರಿಚಯಿಸುವ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಕೃಷಿ ಸಂಶೋಧನೆ ಮಾದರಿಗಳು ನೋಡಲು ಸಿಗಲಿವೆ. ರೈತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕೃಷಿ ಸಂಸ್ಕೃತಿ ಕೂಡ ಅನಾವರಣಗೊಳ್ಳಲಿದೆ. ಕೃಷಿಗೆ ಸಂಬಂಧಿಸಿದ ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮೇಳಕ್ಕೆ ಮೆರುಗು ನೀಡಲಿವೆ.

ಪ್ರಮುಖ ಆಕರ್ಷಣೆ

  • ಕೃಷಿ ಸಂಬಂಧಿತ ವಸ್ತು ಪ್ರದರ್ಶನ
  • ಆರೋಗ್ಯಕರ ಆಹಾರ- ಸುಸ್ಥಿರ ಬೇಸಾಯ ಕುರಿತು ವಿಚಾರ ಸಂಕಿರಣ, ಪರಿಣತರೊಂದಿಗೆ ಸಂವಾದ
  • ಕುಂಬಾರಿಕೆ, ಬುಟ್ಟಿ ನೇಯುವುದು, ಕುಲುಮೆ ಮುಂತಾದ ಕೃಷಿಗೆ ಪೂರಕವಾದ ಕುಲಕಸುಬುಗಳ ಪ್ರಾತ್ಯಕ್ಷಿಕೆ
  • ರಾಗಿ ಮುದ್ದೆ ತಿನ್ನುವ ಸ್ಪರ್ಧೆ
  • ವಿವಿಧ ದೇಸೀ ಕ್ರೀಡೆಗಳು
  • ಕೃಷಿ ವಿಚಾರಗೋಷ್ಠಿ
  • ಜಾನಪದ ಕುಣಿತ ಸ್ಪರ್ಧೆ, ಕಲಾತಂಡಗಳ ಮೆರುಗು
  • ಕೃಷಿ ಮತ್ತು ಸಾಕ್ಷರತೆ ಬಗ್ಗೆ ಜಾಗೃತಿಗಾಗಿ ಹೆಬ್ಬೆಟ್ಟು ನಾಟಕ
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
  • ಶಿವರಾತ್ರಿ ಹಿನ್ನೆಲೆಯಲ್ಲಿ ವಿಶಿಷ್ಟ ಶಿವಲಿಂಗ ಪ್ರದರ್ಶನ
  • ಹಾಸ್ಯ, ಕಿರು ನಾಟಕಗಳ ಪ್ರದರ್ಶನ ಸ್ಪರ್ಧೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net