

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನ.26 ಮತ್ತು 27ರಂದು ಕೃಷಿ ಮೇಳ ಆಯೋಜಿಸಲಾಗಿದೆ. ‘ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ’ ಎಂಬ ಧ್ಯೇಯ ವಾಕ್ಯವನ್ನೊಳಗೊಡಂತೆ ನಡೆಯುತ್ತಿರುವ ಮೇಳದಲ್ಲಿ ಹಲವು ವಿಶೇಷತೆ ಕಾಣಬಹುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು ತಿಳಿಸಿದರು.
ರೈತರ ಸುಸ್ಥಿರತೆ ಕಾಪಾಡಲು ಸಮಗ್ರ ಕೃಷಿ ವಾರ್ಷಿಕ ಬೆಳೆಗಳ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಮತ್ತು ಹಂದಿ ಸಾಕಾಣಿಕೆ ಮಾಡಿದಾಗ ಮಾತ್ರ ಹವಾಮಾನ ವೈಪರಿತ್ಯ ಉಂಟಾದರು ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಈ ಬಗ್ಗೆ ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸ್ಥಳ ಆಧಾರಿತ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿತೆಯನ್ನು ಮೇಳದಲ್ಲಿ ಆಯೋಜಿಸಲಾಗಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
26ರಂದು ಬೆಳಗ್ಗೆ 9.30ಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೃಷಿ ಮೇಳ ಉದ್ಘಾಟಿಸುವರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 27ರ ಮಧ್ಯಾಹ್ನ 3.30ಕ್ಕೆ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಡಾ.ಪಿ.ಎಸ್.ಫಾತಿಮಾ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವಿರಲಿದೆ ಎಂದರು.
ವಲಯ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ಮಾತನಾಡಿ, ಕೃಷಿ ಮೇಳದಲ್ಲಿ ಶೇ.15 ರಷ್ಟು ಪ್ರೊಟಿನ್ ಅಂಶವಿರುವ ಹಾಗೂ ಹಲವು ಆರೋಗ್ಯಕರ ಅನುಕೂಲತೆಗಳನ್ನು ಹೊಂದಿರುವ ನೂತನ ಬೆಳೆ ಹಡಲೇ ರಾಗಿ ಮತ್ತು ಮೂಲತಃ ಹಲಸಂದೇ ಜಾತಿಗೆ ಸೇರಿದ ಬಂಬಾರ ಗ್ರೌಂಡ್‌ನೆಟ್ ಎಂಬ ಬೆಳೆಯು ನೆಲದಲ್ಲೇ ಬೆಳೆಯುವಂತದ್ದಾಗಿದೆ. ಹೃದಯ ಸಂಬಂಧಿತ ಆರೋಗ್ಯಕ್ಕೆ ಉತ್ತೇಜನ ನೀಡಲಿದೆ ಎಂದು ಮಾಹಿತಿ ನೀಡಿದರು.
ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯ ಡೀನ್(ಕೃಷಿ) ಡಾ.ಪಿ.ಎಸ್.ಫಾತಿಮಾ, ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ ಇದ್ದರು.