ಕೃಷಿ ನಿರ್ಲಕ್ಷಿಸಿದರೆ ಅಭಿವೃದ್ಧಿ ಅಸಾಧ್ಯ

krishi new
Published on

ಪೆರ್ಲ: ಜಗತ್ತು ಎಷ್ಟೇ ತಂತ್ರಜ್ಞಾನದಲ್ಲಿ ಮುಂದುವರಿದರೂ ಜನರ ಅಸ್ತಿತ್ವಕ್ಕೆ ಕೃಷಿಯೇ ಮೂಲ. ಕೃಷಿ ಇಲ್ಲದೆ ಜೀವನವೇ ಇಲ್ಲ. ಕೃಷಿಯನ್ನು ನಿರ್ಲಕ್ಷಿಸಿದರೆ ಅಭಿವೃದ್ಧಿ ಅಸಾಧ್ಯ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವುದು ಇಂದಿನ ಅನಿವಾರ್ಯ ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ಹೇಳಿದರು.

ಪೆರ್ಲ ನಾಲಂದ ಕಾಲೇಜು, ಕ್ಯಾಂಪ್ಕೊ ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನ ಸಹಯೋಗದಲ್ಲಿ ಶನಿವಾರ ನಾಲಂದ ಕಾಲೇಜು ಪರಿಸರದಲ್ಲಿ ಆಯೋಜಿಸಲಾದ ಬೃಹತ್ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಶಿಕ್ಷಣ ಕೇಂದ್ರದಲ್ಲಿ ಕೃಷಿ ಮೇಳವನ್ನು ಆಯೋಜಿಸಿ ನಾಡಿಗೆ ಈ ಕಾಲೇಜು ಮಾದರಿಯಾಗಿದೆ. ಶೈಕ್ಷಣಿಕ ಹಾಗೂ ಕೃಷಿ ಕ್ಷೇತ್ರವು ಒಟ್ಟಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದರು.

ಸಹಕಾರಿ ಬ್ಯಾಂಕ್‌ಗಳ ಜಿಲ್ಲಾ ಸಹಾಯಕ ನಿರ್ದೇಶಕ ಜಯಚಂದ್ರನ್ ಮಾತನಾಡಿ, ಕೃಷಿಕರು ಇಲ್ಲದಿದ್ದರೆ ಭಾರತವೇ ಇಲ್ಲ. ವೈದ್ಯಕೀಯ- ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗುವುಂತೆ ಕೃಷಿ ಕಾಲೇಜುಗಳು ಸ್ಥಾಪನೆಯಾಗುತ್ತಿಲ್ಲ. ಕೃಷಿ ಸಂಶೋಧನೆ, ಆಧುನಿಕ ತಂತ್ರಜ್ಞಾನಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಇವೆಲ್ಲವೂ ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗುತ್ತಿದೆ. ಸಹಕಾರಿ ಕ್ಷೇತ್ರವು ಕೃಷಿ ಅಭಿವೃದ್ಧಿಗೆ ಮುತುವರ್ಜಿ ವಹಿಸುತ್ತಿರುವುದು ಆಶಾದಾಯಕವಾಗಿದೆ. ತಂತ್ರಜ್ಞಾನವು ಹಳ್ಳಿಯ ಕೃಷಿಕನಿಗೆ ತಲುಪಬೇಕು ಎಂದು ಹೇಳಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಾಲಂದ ಕಾಲೇಜು ಕಾಲೇಜು ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ ವಂದಿಸಿದರು. ಉಪನ್ಯಾಸಕ ಅಮೃತ ಹಾಗೂ ವಿನೀಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಡಕೆ ಕೃಷಿಯಲ್ಲಿ ಆಧುನಿಕತೆ, ಕೊಕ್ಕೋ ಕೃಷಿ ಸವಾಲುಗಳು, ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ, ಸಾವಯವ ಕೃಷಿ ಮೊದಲಾದವುಗಳ ಬಗ್ಗೆ ವಿಚಾರಗೊಷ್ಠಿಗಳು ನಡೆದವು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ವಸ್ತು ಪ್ರದರ್ಶನವನ್ನು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.

ಇಂದು ಆಧುನಿಕತೆ ಹಾಗೂ ರಂಗಿನ ಜೀವನಕ್ಕೆ ಮಾರುಹೋಗಿ ಕೃಷಿಯು ನಿಧಾನವಾಗಿ ಬದಿಗೆ ಸರಿಯುತ್ತಿದೆ. ಕೃಷಿಯೇ ನಮ್ಮ ನಿಜ ಸಂಸ್ಕೃತಿಯಾಗಿದ್ದು, ಅದರ ಬಗ್ಗೆ ಆಸಕ್ತರಾಗುವುದು ಪ್ರತಿಯೊಬ್ಬರ ಕರ್ತವ್ಯ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ, ಸಾವಯವ ಕೃಷಿ ಪದ್ಧತಿಯನ್ನು ಬಳಕೆ ಮಾಡುವುದು, ಸರಳ ಜೀವನ ಅಳವಡಿಸಿಕೊಳ್ಳುವುದು ನಮ್ಮ ಬದುಕಾಗಬೇಕು. ಒಳ್ಳೆಯ ಗಾಳಿ, ಸಂತೋಷ ಸಿಗುವುದು ಹಳ್ಳಿಯಿಂದ ಮಾತ್ರ.

ಡಾ.ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ

ಪ್ರದರ್ಶನ ಮಳಿಗೆ: ವಿವಿಧ ರೀತಿಯ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ, ಬೀಜಗಳು, ನರ್ಸರಿ ಗಿಡಗಳು, ಕೃಷಿ ಉತ್ಪನ್ನಗಳು, ತಿಂಡಿ ತಿನಸು, ಪುಸ್ತಕ ಪ್ರದರ್ಶನಗಳ ಸುಮಾರು ನೂರಕ್ಕೂ ಮಿಕ್ಕಿದ ಸ್ಟಾಲ್‌ಗಳು ಇದ್ದವು. ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಕೃಷಿಕರು ಕೃಷಿ ಮೇಳದಲ್ಲಿ ಭಾಗವಹಿಸಿದರು.

ನಗದು ಬಹುಮಾನ: ಸಾಯಂಕಾಲ ಸಮಾರೋಪದಲ್ಲಿ ಕೃಷಿ ಯಂತ್ರೋಪಕರಣಗಳ ನಿರ್ಮಾಣ, ಪ್ರಚಾರದಲ್ಲಿ ಗುರುತಿಸಲ್ಪಟ್ಟವರಿಗೆ ಕ್ಯಾಂಪ್ಕೊ ವತಿಯಿಂದ ನಗದು ಬಹುಮಾನಗಳನ್ನು ನೀಡಲಾಯಿತು. ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್‌ನ ನಾರಾಯಣ ನೆಲ್ಲಿತ್ತಾಯ ಅವರಿಗೆ ಪ್ರಥಮ 1 ಲಕ್ಷ ರೂ. ನಗದು ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವರ್ಕ್ಸ್‌ನ ರಾಮಚಂದ್ರ ಭಟ್ ಅವರಿಗೆ ದ್ವಿತೀಯ ಬಹುಮಾನ 50 ಸಾವಿರ ನಗದು ಹಾಗೂ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ವರ್ಕ್ಸ್‌ನ ಅಕ್ಷಯ್ ಮತ್ತು ಬಳಗಕ್ಕೆ ಪ್ರೋತ್ಸಾಹಕ 10 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net