ಸಿರಿಧಾನ್ಯ ಶ್ರೀಮಂತರ ಅನಿವಾರ್ಯ ಆಹಾರ : ಕೃಷಿ ಸಚಿವ ಬಿ.ಸಿ.ಪಾಟೀಲ್

DSC_3447
Published on

ತುಮಕೂರು : ಬಡವರ ಆಹಾರವಾಗಿದ್ದ ಸಿರಿಧಾನ್ಯ ಇಂದು ಶ್ರೀಮಂತರ ಅನಿವಾರ್ಯ ಆಹಾರವಾಗಿದೆ, ಸಾಕಷ್ಟು ಕಾಯಿಲೆಗಳಿಗೆ ರಾಮಬಾಣವಾಗಿರುವ ಸಿರಿಧಾನ್ಯಕ್ಕೆ ಮಾರುಕಟ್ಟೆ ಸೃಷ್ಟಿಯಾಗುತ್ತಿದ್ದು, ರೈತರು ಸಿರಿಧಾನ್ಯ ಬೆಳೆಯಲು ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರ ಜಿಲ್ಲಾಡಳಿತ ಹಾಗೂ ಕೃಷಿಕ ಸಮಾಜದಿಂದ ಬುಧವಾರ ಆಯೋಜಿಸಿದ್ದ ಕೃಷಿ ಭವನ ಕಟ್ಟಡದ ಉದ್ಘಾಟನೆ ಮತ್ತು ಜಿಲ್ಲಾಮಟ್ಟದ ಸಿರಿಧಾನ್ಯಗಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ಕರೊನಾ ನಂತರ ಕೃಷಿ ಕ್ಷೇತ್ರ ಸುಧಾರಣೆ ಕಂಡಿದೆ, ಕೃಷಿ ಉಳಿದರೆ ರೈತರು ಉಳಿಯುತ್ತಾರೆ, ರೈತ ಉಳಿದರಷ್ಟೇ ದೇಶ ಉಳಿಯುತ್ತದೆ. ಇಂತಹ ಮಹತ್ವವಿರುವ ಕೃಷಿ ಕಾಯಕವನ್ನು ನಾವು ಮರೆಯುತ್ತಿರುವ ನೋವಿನ ಸಂಗತಿ, ರೈತರು ಸ್ವಾವಲಂಭಿಗಳಾಗಲು ಕೃಷಿ ಪದ್ಧತಿಯಲ್ಲಿ ಬದಲಾವಣೆ ಬೇಕಿದೆ. ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋಲಾರದಲ್ಲಿ ನೀರಾವರಿ ಕ್ಷೇತ್ರ ಕಡಿಮೆ ಇದ್ದರೂ ಅಲ್ಲಿನ ರೈತರು ಮಿಶ್ರ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ, ಆ ಭಾಗದಲ್ಲಿ ರೈತರ ಆತ್ಮಹ್ಯತೆಯೂ ಕಡಿಮೆ ಇದೆ. ಆದ್ದರಿಂದ ಈ ಭಾಗದ ರೈತರು ಇಂತಹ ಹೊಸಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿಯೂ ಸದೃಢರಾಗಬೇಕು ಎಂದರು.

ರಾಜ್ಯದಲ್ಲಿ 61 ಸಾವಿರ ಎಕರೆಗಳಲ್ಲಿ 41 ಸಾವಿರ ಮೆಟ್ರಿಕ್ ಟನ್ ಸಿರಿಧಾನ್ಯ ಬೆಳೆಯಲಾಗುತ್ತಿದೆ, ರಾಗಿ, ನವಣೆ ಆರಕ, ಉದ್ದು ಸೇರಿ ಅನೇಕ ಸಿರಿಧಾನ್ಯಗಳಲ್ಲಿ ಪೌಷ್ಟಿಕ ಅಂಶಗಳಿವೆ. ಪ್ರತಿಯೊಂದರಲ್ಲಿ ಹಲವಾರು ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಇದರ ಉಪಯುಕ್ತತೆ ಜನರಿಗೆ ತುಂಬ ಅವಶ್ಯಕವಾದ್ದರಿಂದ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ಹೇಳಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರಕೃತಿಗಿಂತ ದೊಡ್ಡವರು ಯಾರೂ ಇಲ್ಲ, ಅದರ ವಿರುದ್ಧವಾಗಿ ನಡೆದರೆ ಬದುಕು ಕಷ್ಟವಾಗಲಿದೆ. ಪಾಶ್ಚಾತ್ಯರ ಅನುಕರಣೆಯ ಕಾರಣಕ್ಕೆ ನಮ್ಮತನ ಕಳೆದುಕೊಂಡೆವು, ಪ್ರಕೃತಿಗೆ ಹೊಂದಿಕೊಂಡಿರುವ ಸಿರಿಧಾನ್ಯ ಬೆಳೆಯುವುದು ಆರೋಗ್ಯಕ್ಕೆ ಅನಿವಾರ್ಯ ಎಂದರು. ಹಸಿರು ಕ್ರಾಂತಿಯ ನಂತರ ದೇಶದಲ್ಲಿ ಆಹಾರ ಸಮಸ್ಯೆ ಕಡಿಮೆಯಾಗಿದೆ, ನಾವು ಬೆಳೆಯುವ ಸಂಪ್ರದಾಯಿಕ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಜಿಲ್ಲೆಯ ಪ್ರಗತಿಪರ ಕೃಷಿಕರಾದ ಸಿದ್ದಮ್ಮ, ಕೃಷ್ಣಮೂರ್ತಿ, ಕರಿಯಪ್ಪ ಅವರಿಗೆ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೇಯರ್ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಕೃಷಿಕ ಸಮಾಜದ ಅಧ್ಯಕ್ಷ ಮಹೇಂದ್ರನಾಥ್, ಜಿಪಂ ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿ.ಸಿ.ಪಾಪಣ್ಣ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ಉಪನಿರ್ದೇಶಕ ಉಮೇಶ್ ಇದ್ದರು.

ಕಳೆಗಟ್ಟದ ಸಿರಿಧಾನ್ಯ ಹಬ್ಬ : ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗ ಆಯೋಜಿಸಲಾಗಿದ್ದ ಸಿರಿಧಾನ್ಯ ಹಬ್ಬ ಕಳೆಗಟ್ಟಿರಲಿಲ್ಲ, ಕೆಲವು ಸಂಘ, ಸಂಸ್ಥೆಗಳು ಸಿರಿಧಾನ್ಯಗಳಿಂದ ತಯಾರಿಸಿದ್ದ ಆಹಾರ ಪದಾರ್ಥಗಳನ್ನು ವ್ಯಾಪಾರಕ್ಕಿಟ್ಟಿದ್ದಷ್ಟೇ ಹಬ್ಬದ ವಿಶೇಷತೆ ಎನಿಸಿತು. ಸಿರಿಧಾನ್ಯ ಬೆಳೆಯುವ ರೈತರು ಮೇಳದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳಲಿಲ್ಲ, ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಸರ್ಕಾರ ನಿಲ್ಲಿಸಿರುವ ಹಿನ್ನೆಲೆಯಲ್ಲಿ ರೈತರು ನಿರುತ್ಸಾಹ ತೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net