

ಸುಳ್ಯ: ಎಲ್ಲದರಲ್ಲೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಉದಾತ್ತ ಚಿಂತನೆಯನ್ನು ವೇದಗಳು ಭಾರತೀಯರಿಗೆ ನೀಡಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ 25ನೇ ವರ್ಷದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ವೇದ ವಿದ್ವಾಂಸ ಕೇಶವ ಜೋಯಿಸ ವಳಲಂಬೆ ಶಿಬಿರ ಉದ್ಘಾಟಿಸಿದರು. ವಕೀಲ ಮಹೇಶ ಕಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರವಿಶಂಕರ ರಾವ್ ದೇವ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್, ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಉಪಸ್ಥಿತರಿದ್ದರು. ಅಭಿರಾಮ್ ಭಟ್ ಸ್ವಾಗತಿಸಿದರು. ಪ್ರತಿಷ್ಠಾನ ಸಂಚಾಲಕಿ ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದರ್ಶನ ಭಟ್ ಉಜಿರೆ ವಂದಿಸಿದರು. ಅಕ್ಷತಾ ನಾಯಕ್ ಜಯನಗರ ಹಾಗೂ ಉದಯ ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು.
ಒಂದು ತಿಂಗಳು ನಡೆಯುವ ಉಚಿತ ಶಿಬಿರದಲ್ಲಿ ವೇದದ ಜತೆಗೆ ಯೋಗ, ಜಾನಪದ, ಸೃಜನಶೀಲ ಕಲೆಗಳನ್ನು ಕಲಿಸಲಾಗುತ್ತದೆ. ಈಜು ತರಬೇತಿ, ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 200 ಶಿಬಿರಾರ್ಥಿಗಳಿಗೆ ವೇದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.