ಕೃಷ್ಣರಾಜದಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ

Krishnaraja_Vidhana_Sabha_Constituency
Published on

ಅವಿನಾಶ್ ಜೈನಹಳ್ಳಿ ಮೈಸೂರು


ಮೇಲ್ವರ್ಗದವರೇ ಹೆಚ್ಚಾಗಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವರ್ಷ ಮುನ್ನವೇ ಚುನಾವಣಾ ಕಣ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ನಾನಾ ತಂತ್ರ ರೂಪಿಸುತ್ತಿದ್ದಾರೆ.
ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳ ಪೈಕಿ ಕೃಷ್ಣರಾಜವೂ ಒಂದಾಗಿದ್ದು, 2023ರ ಚುನಾವಣೆಯ ಕಾವು ಏರ ತೊಡಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ. ಜೆಡಿಎಸ್‌ನಿಂದಲೂ ಕೆಲವರು ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಬ್ರಾಹ್ಮಣರ ನಂತರ ವೀರಶೈವ ಲಿಂಗಾಯತ ಮತದಾರರು ಹೆಚ್ಚಾಗಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ದಲಿತ, ಕುರುಬ, ಒಕ್ಕಲಿಗ ಸಮುದಾಯದ ಮತದಾರರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ, ಮೂರು ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪೈಕಿ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದವರೇ ಹೆಚ್ಚಾಗಿರುವುದು ವಿಶೇಷ.


ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳು!
ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರಿದ್ದರೂ 2023ರ ಚುನಾವಣೆಗೆ ಆ ಪಕ್ಷದಿಂದ ಟಿಕೆಟ್ ಪಡೆಯಲು ಅನೇಕರು ಪ್ರಯತ್ನ ನಡೆಸುತ್ತಿದ್ದಾರೆ. ಶಾಸಕ ಎಸ್.ಎ.ರಾಮದಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲಾಕ್) ಅಧ್ಯಕ್ಷ ಎನ್.ವಿ.ಫಣೀಶ್, ಪಾಲಿಕೆ ಸದಸ್ಯ ಎಂ.ಪಿ.ರಮೇಶ್ ಆಕಾಂಕ್ಷಿಗಳಾಗಿದ್ದಾರೆ. ಈ ಎಲ್ಲರೂ ಬ್ರಾಹ್ಮಣ ಸಮುದಾಯದವರೇ ಆಗಿರುವುದು ವಿಶೇಷ.
ಈ ಪೈಕಿ ಶಾಸಕ ಎಸ್.ಎ.ರಾಮದಾಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜತೆಗೆ, ಸಚಿವ ಸಂಪುಟ ವಿಸ್ತರಣೆಯಾದರೆ ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.


ಸಚಿವ ಸ್ಥಾನದ ಜತೆಗೆ 2023ರ ಚುನಾವಣೆಗೂ ಸ್ಪರ್ಧಿಸಲು ಕ್ಷೇತ್ರದ ನಾನಾ ಭಾಗಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಾಯಕರ ಗಮನ ಸೆಳೆಯಲು ಮುಂದಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಶಾಸಕರು, ಪಕ್ಷವನ್ನು ಪ್ರಬಲವಾಗಿ ಸಂಘಟಿಸುತ್ತಿದ್ದಾರೆ. ಜತೆಗೆ, ತಮ್ಮ ಆಸರೆ ಫೌಂಡೇಷನ್ ಮೂಲಕವೂ ಅನೇಕ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ 1994, 1999, 2004, 2008, 2013 ಹಾಗೂ 2018ರ ಚುನಾವಣೆಗಳಲ್ಲಿ ಒಟ್ಟು 6 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 4 ಬಾರಿ ಗೆದ್ದಿದ್ದಾರೆ. ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2023ರ ಚುನಾವಣೆಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಎಚ್.ವಿ.ರಾಜೀವ್ ಹಾಗೂ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಎಚ್.ವಿ.ರಾಜೀವ್ 8 ವರ್ಷದಿಂದಲೂ ಸ್ವಚ್ಛ ಭಾರತ ಆಂದೋಲನ ನಡೆಸುವ ಮೂಲಕ ರಾಷ್ಟ್ರಮಟ್ಟದ ನಾಯಕರ ಬಳಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ರಾಜೀವ್ 15,573 ಮತಗಳನ್ನು ಗಳಿಸಿದ್ದರು. ಆಗ ಮತ ವಿಭಜನೆಯ ಲಾಭ ಪಡೆದಿದ್ದ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್ 52,611 ಮತಗಳನ್ನು ಪಡೆದು ಜಯ ಪಡೆದರು. ಎಸ್.ಎ.ರಾಮದಾಸ್ 46,546 ಮತ ಪಡೆದು ಸೋಲು ಅನುಭವಿಸಿದ್ದು ಇತಿಹಾಸ.


ಶ್ರೀವತ್ಸ ಕೂಡ ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2023ರ ಚುನಾವಣೆಗೆ ಶ್ರೀವತ್ಸ ಅವರಿಗೆ ಟಿಕೆಟ್ ನೀಡಬೇಕು ಎಂದು ಸಂಘ ಪರಿವಾರದ ನಾಯಕರು ಒತ್ತಾಯ ಮಾಡುತ್ತಿರುವ ಬಗ್ಗೆ ಮೂಲಗಳು ತಿಳಿಸಿವೆ. ಎನ್.ವಿ.ಫಣೀ ಮತ್ತು ಎಂ.ಪಿ.ರಮೇಶ್ ತಮ್ಮದೇ ಮೂಲಗಳಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಕಾಂಗ್ರೆಸ್‌ನಲ್ಲೂ ಇದ್ದಾರೆ ಆಕಾಂಕ್ಷಿಗಳು!
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಯುವ ಮುಖಂಡರಾದ ಎನ್.ಎಂ.ನವೀನ್‌ಕುಮಾರ್, ಪ್ರದೀಪ್ ಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎಂ.ಕೆ.ಸೋಮಶೇಖರ್ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತೆಯೆ, ಕ್ಷೇತ್ರದಲ್ಲಿ ಉದ್ಯೋಗ ಮೇಳ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪಕ್ಷ ಕಟ್ಟುವ ಕೆಲಸವನ್ನೂ ಮಾಡುತ್ತಿದ್ದಾರೆ. ಕುರುಬ ಸಮುದಾಯದ ನಾಯಕರಾಗಿರುವ ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಕ್ಷೇತ್ರದಲ್ಲಿ 5 ಬಾರಿ ಚುನಾವಣೆಗೆ ಸ್ಪರ್ಧಿಸಿ 2 ಬಾರಿ ಶಾಸಕರಾಗಿದ್ದಾರೆ.


1999 ಮತ್ತು 2004ರ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ, 2008, 2013, 2018ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡೂ ಪಕ್ಷಗಳಿಂದ ಒಮ್ಮೊಮ್ಮೆ ಗೆಲುವು ಕಂಡಿದ್ದಾರೆ. ವಿಶೇಷವೆಂದರೆ, ಐದು ಬಾರಿಯೂ ಎಸ್.ಎ.ರಾಮದಾಸ್ ವಿರುದ್ಧವೇ ಮುಖಾಮುಖಿಯಾಗಿದ್ದಾರೆ. 2023ರ ಚುನಾವಣೆಗೆ ಮತ್ತೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.


ಯುವ ಮುಖಂಡ ಎನ್.ಎಂ.ನವೀನ್‌ಕುಮಾರ್ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯದವರಾದ ಇವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್‌ಕುಮಾರ್ ಅವರ ಪುತ್ರ. ಕಳೆದ ಎರಡು ವರ್ಷಗಳಿಂದಲೂ ಕ್ಷೇತ್ರದಲ್ಲಿ ಜೋರಾಗಿ ಓಡಾಟ ನಡೆಸುತ್ತ ಪಕ್ಷ ಕಟ್ಟುತ್ತಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಕಾಂಗ್ರೆಸ್ ಸದಸ್ಯರಾಗಿ ನೋಂದಾಯಿಸಿದ್ದಾರೆ. ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ನಗರ ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಕೂಡ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್‌ನಿಂದ ನಗರಪಾಲಿಕೆ ಮಾಜಿ ಸದಸ್ಯ, ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಕೆ.ವಿ.ಮಲ್ಲೇಶ್ ಮತ್ತೆ ಟಿಕೆಟ್ ಬಯಸುತ್ತಿದ್ದಾರೆ. ಇವರು 2018ರ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಕಳೆದ ಬಾರಿ ನಿರಾಸೆಯಾಗಿದ್ದ ಮಾಜಿ ಉಪ ಮೇಯರ್, ದಲಿತ ಸಮುದಾಯದ ಮುಖಂಡ ವಿ.ಶೈಲೇಂದ್ರ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಸಂತೋಷ್ ಅಮ್ಮ ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಸಮರ್ಥ ಅಭ್ಯರ್ಥಿಗೆ ಹುಡುಕಾಟ:
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಮೂರೂ ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ಇತಿಹಾಸ ಇದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಬಲವಾಗಿವೆ. ಒಂದು ಕಾಲದಲ್ಲಿ ಕ್ಷೇತ್ರದಲ್ಲಿ ಅಪಾರ ಹಿಡಿತ ಸಾಧಿಸಿದ್ದ ಜೆಡಿಎಸ್ ಕೊಂಚ ಪ್ರಾಬಲ್ಯ ಕಳೆದುಕೊಂಡಿದ್ದು, ದಳಪತಿಗಳು ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್‌ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.
ಸಮರ್ಥ ಅಭ್ಯರ್ಥಿ ನಿಲ್ಲಿಸಿ ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಮಲ ಪಾಳಯ ಸಜ್ಜಾಗುತ್ತಿದೆ. ಇತ್ತ ಕಾಂಗ್ರೆಸ್ ನಾಯಕರು ಕಳೆದುಕೊಂಡ ಕ್ಷೇತ್ರವನ್ನು ಮತ್ತೆ ಪಡೆಯಲು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ. ಪ್ರಮುಖ ಮೂರೂ ಪಕ್ಷಗಳು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿವೆ ಮತ್ತು ವಿವಿಧ ರೀತಿಯ ತಂತ್ರಗಾರಿಕೆ ನಡೆಸುತ್ತಿವೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಪ್ರಮುಖರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇವೆ ಎಂಬ ಚರ್ಚೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net