

ಕಾರವಾರ: ಸರ್ಕಾರದ ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನ ನೀಡುವಂತೆ ಸರ್ಕಾರಿ ಮೆಡಿಕಲ್ ಕಾಲೇಜ್ (ಕ್ರಿಮ್ಸ್)ನ ಹೊರ ಗುತ್ತಿಗೆ ನೌಕರರು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಮಾಡಿದ್ದಾರೆ.
ಸಾಂಕೇತಿಕ ಪ್ರತಿಭಟನೆ ಮಾಡಿ ನೌಕರರು ತಮ್ಮ ಅಹವಾಲು ಪತ್ರವನ್ನು ಸಲ್ಲಿಸಿದರು.
ಸರ್ಕಾರದ ಕಾರ್ಮಿಕ ಕಾಯ್ದೆಯಂತೆ ಕುಶಲ ಹಾಗೂ ಅರೆ ಕುಶಲ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿದೆ.
ಕ್ರಿಮ್ಸ್ ನಲ್ಲಿ ಡಿ ದರ್ಜೆ ನೌಕರರು, ನಾನ್ ಕ್ಲೀನಿಕಲ್ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್, ಡ್ರೈವರ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್, ಇಲೆಕ್ಟ್ರೀಶಿಯನ್ ಹೀಗೆ ವಿವಿಧ ಹುದ್ದೆಗಳಲ್ಲಿ 100 ಕ್ಕೂ ಅಧಿಕ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಕನಿಷ್ಠ ಕೂಲಿ ಕಾಯ್ದೆಯಂತೆ ಪ್ರತಿ ವರ್ಷ ವೇತನ ಹೆಚ್ಚುತ್ತಿದೆ. ನಾವು, ಹತ್ತು, ಹದಿನೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದವರಿದ್ದೇವೆ. ಹೊರ ಗುತ್ತಿಗೆ ಏಜೆನ್ಸಿಗಳಡಿ 11,200 ರೂ. ಮಾತ್ರ ಮಾಸಿಕ ವೇತನ ನೀಡಲಾಗುತ್ತದೆ. ಅದೂ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿಸುವುದಿಲ್ಲ. ಪಿಎಫ್, ಇಎಸ್‌ಐ ಸೌಲಭ್ಯಗಳನ್ನು ನೀಡದೇ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.
ಕಾಯ್ದೆಯಂತೆ ಕನಿಷ್ಠ ವೇತನ ಕೊಡಿಸಬೇಕು. ಪಿಎಫ್, ಇಎಸ್ಐ ಔಲಭ್ಯ ಕೊಡಿಸಬೇಕು. ಮಾಸಿಕ ಸರಿಯಾದ ವೇಳೆಗೆ ವೇತನ ಪಾವತಿಸುವಂತಾಗಬೇಕು ಎಂದು ಮನವಿ ಮಾಡಿದರು.