ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಆಶಯ
ತಿ.ನರಸೀಪುರ : ಲೋಕ ನಾಯಕನಾದ ಶ್ರೀ ಕೃಷ್ಣ ನಿತ್ಯವೂ ನಮ್ಮೆಲ್ಲರ ಹೃದಯದಲ್ಲಿ ನೆಲೆ ನಿಂತು ಮಹೋನ್ನತ ಸಾಧನೆಗಳಿಗೆ ಪ್ರೇರಣೆ ನೀಡಲಿ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನುಡಿದರು. ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಅವರು ಜನ್ಮಾಷ್ಟಮಿ ಮಂಗಳವಾರ ವಿಶೇಷ ಪೂಜಾದಿಗಳನ್ನು ನೆರವೇರಿಸಿ, ಅರ್ಘ್ಯ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು. ದಶಾವತಾರಗಳಲ್ಲಿ ಶ್ರೀ ಕೃಷ್ಣಾವತಾರ ಬಹು ವಿಶೇಷ. ಅವನನ್ನು ಸಂಪೂರ್ಣ ಸೆರೆ ಹಿಡಿಯುವ ಸಾಮರ್ಥ್ಯ ಯಾರಿಗೂ ಬರಲೇ ಇಲ್ಲ. ಹಾಗಾಗಿ ಕೃಷ್ಣನನ್ನು ನಮ್ಮ ನಮ್ಮ ಜ್ಞಾನ, ಅರಿವು ಮತ್ತು ಅಧ್ಯಯನದ ಯೋಗ್ಯತಾನುಸಾರ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು ಎಂದರು. ದುಷ್ಟರ ಸಂಹಾರವನ್ನು ಎಳವೆಯಿಂದಲೇ ಮಾಡಿದ ಕೃಷ್ಣ, ಧರ್ಮಸಂರಕ್ಷಣೆಯ ಮಹತ್ವವನ್ನು ವಿಶ್ವಕ್ಕೆ ತಿಳಿಸಿದ. ದ್ರೌಪದಿ ದೇವಿಯ ಮಾನ ಸಂರಕ್ಷಿಸುವ ಮೂಲಕ ಸ್ತ್ರೀಯರನ್ನು ಗೌರವದಿಂದ ಕಾಣಬೇಕೆಂಬ ಸಂದೇಶ ನೀಡಿದ್ದಾನೆ. ಸಾಮಾನ್ಯರ ನಡುವೆಯೇ ಗೋಪಾಲಕನಾಗಿದ್ದು ಆತ ತೋರಿಸಿದ ಅಸಾಮಾನ್ಯ ಶಕ್ತಿಯ ವಿರಾಟ್ ದರ್ಶನ ಅನನ್ಯ ಎಂದವರು ಸ್ವಾಮೀಜಿ ನುಡಿದರು. ಬಾಲ್ಯದ ಸಖ ಸುಧಾಮನ ಮಿತ್ರತ್ವಕ್ಕೆ ಮಾನ್ಯತೆ ನೀಡಿದ ಕೃಷ್ಣ, ಧರ್ಮದ ಮಾರ್ಗದಲ್ಲಿದ್ದ ಪಾಂಡವರ ಪರವಾಗಿದ್ದ.ಒಂದೂ ಶಸ್ತ್ರ ಹಿಡಿಯದೇ ಮಹಾಭಾರತ ಯುದ್ಧ ನಿಯಂತ್ರಿಸಿದ. ಸಮರ ಭೂಮಿಯಲ್ಲೇ ಭಗವದ್ಗೀತೆ ಬೋಧನೆ ಮಾಡಿದ. ಸಂಕಷ್ಟಗಳ ಸಾಗರದ ನಡುವೆಯೇ ನಾವು ಕೊಂಚ ವಿರಾಮ ಪಡೆದು ಸಮಸ್ಯೆಗಳನ್ನು ಯುಕ್ತಿಯಿಂದ ಜಯಿಸಬೇಕು ಎಂಬ ಸಂದೇಶ ಸಾರಿದ್ದಾನೆ ಎಂದು ಸ್ವಾಮೀಜಿ ಕೃಷ್ಣಾವತಾರದ ಮಹತ್ವ ವಿವರಿಸಿದರು.
ಭಗವದ್ಗೀತೆ ಆದರ್ಶವಾಗಬೇಕು: ಒಬ್ಬ ರಾಜತಾಂತ್ರಿಕ ಹೇಗಿರಬೇಕು ಎಂಬ ಪಾಠವನ್ನೂ ವಿಶ್ವಕ್ಕೆ ಕೃಷ್ಣ ತಿಳಿಸಿದ್ದಾನೆ. ಅಧರ್ಮ, ಅರಾಜಕತೆ, ಅನ್ಯಾಯದ ಆಡಳಿತ, ಅವ್ಯವಹಾರ ಇಂದು ಹಲವೆಡೆ ವಿಜೃಂಭಿಸುತ್ತಿವೆ. ಇಂಥ ಕಾಲಘಟ್ಟದಲ್ಲಿ ಭಗವದ್ಗೀತೆ ನಾಡಿಗೆ ಆದರ್ಶವಾಗಬೇಕು. ಆದರ್ಶದ ಬಹುದೊಡ್ಡ ಪ್ರತೀಕವೇ ಕೃಷ್ಣ. ಆದ ಕಾರಣ ಅವನು ಲೋಕಗುರು. ಆತನ ಜಯಂತಿ ವಿಶ್ವಕ್ಕೆ ಹಬ್ಬವಾಗಲಿ ಎಂದು ಸ್ವಾಮೀಜಿ ಆಶಿಸಿದರು. ಅಧರ್ಮ, ಅರಾಜಕತೆ, ಅನ್ಯಾಯದ ಆಡಳಿತಗಳು ಇಂದು ಹಲವೆಡೆ ವಿಜೃಂಭಿಸುತ್ತಿವೆ. ಇಂಥ ಕಾಲಘಟ್ಟದಲ್ಲಿ ಭಗವದ್ಗೀತೆ ನಾಡಿಗೆ ಆದರ್ಶವಾದರೆ ಮಾತ್ರ ನಾವು ಸುಭಿಕ್ಷ ರಾಮರಾಜ್ಯವನ್ನು ಕಾಣಲು ಸಾಧ್ಯ ಎಂದು ವಿದ್ಯಾಶ್ರೀಶ ತೀರ್ಥರು ಹೇಳಿದರು. ಮಠದ ವಿದ್ವಾಂಸರು, ಪಂಡಿತರು ಹಾಜರಿದ್ದರು.
ವಿವಿಧ ಸ್ಪರ್ಧೆ: ನಂತರ ಸಂಸ್ಥಾನ ಪ್ರತಿಮೆಗಳಿಗೆ ಮತ್ತು ಮೂಲ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಮಂಗಳಾರತಿ ಸಮರ್ಪಣೆ ಮಾಡಿದರು. ಇದೇ ಸಂದರ್ಭ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಯಿತು. ದೇವರನಾಮ. ಚಿತ್ರಕಲಾ ಸ್ಪರ್ಧೆ, ಭಗವದ್ ಗೀತಾ ಕಂಠಪಾಠ ಸ್ಪರ್ಧೆ ಮತ್ತು ರಾಧಾ- ಕೃಷ್ಣರ ವೇಷ ಭೂಷಣ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.