ಉಡುಪಿಯ ಪ್ರಮುಖ ವೃತ್ತಕ್ಕೆ ರಾಯಣ್ಣನ ಹೆಸರಿಡಿ

Published on

ಜಯಕರ ಶೆಟ್ಟಿ ಇಂದ್ರಾಳಿ ಆಶಯ | ಅಭಿಮಾನಿ ಬಳಗದ ಪ್ರಶಸ್ತಿ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನ ಹೆಸರು ಶಾಶ್ವತವಾಗಿ ಉಳಿಯಬೇಕಿದೆ. ಆ ನಿಟ್ಟಿನಲ್ಲಿ ಉಡುಪಿಯಲ್ಲೂ ಸಹ ಯಾವುದಾದರೂ ಪ್ರಮುಖ ವೃತ್ತಕ್ಕೆ ರಾಯಣ್ಣನ ಹೆಸರು ನಾಮಕರಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಆಶಯ ವ್ಯಕ್ತಪಡಿಸಿದರು.

ಉಡುಪಿಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಘಟಕದ ಸಹಕಾರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಉಡುಪಿಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

UDP-17-1-Rayanna
ಉಡುಪಿಯಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವನಾಥ ಶೆಣೈ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಪ್ರಭಾಕರ ಪೂಜಾರಿ, ರವಿರಾಜ್​ ಎಚ್​.ಪಿ., ಪೂರ್ಣಿಮಾ ಆರ್​. ಇತರರಿದ್ದರು.

ಉ.ಕ.ದವರ ಕೊಡುಗೆ ಅಪಾರ

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಉತ್ತರ ಕರ್ನಾಟಕದವರ ಕೊಡುಗೆಯೂ ಅಪಾರವಿದೆ. ಆ ಭಾಗದ ವಿವಿಧ ಜಿಲ್ಲೆಗಳಿಂದ ಹತ್ತು ಸಾವಿರಕ್ಕಿಂತಲೂ ಅಧಿಕ ಕುಟುಂಬಗಳು ನಮ್ಮ ಜಿಲ್ಲೆಯಲ್ಲಿ ನೆಲೆಸಿದ್ದು, ಇಲ್ಲಿನ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅವರ ಶ್ರಮಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಪ್ರಶಸ್ತಿ ಪ್ರದಾನ

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ ಪ್ರಶಸ್ತಿ ಪ್ರದಾನ ಮಾಡಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್​ ಮದ್ವರಾಜ್​ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಕನ್ನಡಪರ ಹೋರಾಟಗಾರ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.

ವಿ.ಉಮಾಶಂಕರಿ ಪ್ರಾರ್ಥಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಆಶಯ ಭಾಷಣ ಮಾಡಿದರು. ಕೋಶಾಧಿಕಾರಿ ರಾಜೇಶ್​ ಭಟ್​ ಪಣಿಯಾಡಿ ಸ್ವಾಗತಿಸಿದರು. ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕರ್ವಾಲು ನಿರೂಪಿಸಿದರು. ಅಭಿಮಾನಿ ಬಳಗದ ಲಕ್ಷ್ಮಣ ಕೋಲ್ಕಾರ್​ ವಂದಿಸಿದರು.

ಕನ್ನಡಕ್ಕಾಗಿ ಹೆಚ್ಚಿನ ಸೇವೆ ನೀಡೋಣ

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಆರ್​. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಕಾರ್ಯ. ಕನ್ನಡ ನಾಡು-ನುಡಿ, ಸಂಸ್ಕೃತಿಗೆ ನಾವೆಲ್ಲರೂ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಬೇಕಾಗಿದೆ. ಕಸಾಪ ಉಡುಪಿ ಘಟಕವು ವಿನೂತನ ಅಭಿಯಾನಗಳ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದು, ಮಾದರಿಯಾಗಿದೆ ಎಂದರು.

ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ದೇಶಕ್ಕಾಗಿ ರಾಯಣ್ಣ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಆದರ್ಶ ಅನುಕರಣೀಯವಾಗಿದ್ದು, ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕಿದೆ. ನಮ್ಮ ಹಿಂದು ಸಂಸ್ಕೃತಿಗೆ ಯಾವುದೇ ರೀತಿಯ ತೊಂದರೆಯಾಗದಂತಹ ಜೀವನ ರೂಢಿಸುವುದು ಇಂದಿನ ಅಗತ್ಯವಾಗಿದೆ.| ವಿಜಯ್​ ಕೊಡವೂರು. ನಗರಸಭಾ ಸದಸ್ಯ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net