

ಆಯನೂರು: ಸಮೀಪದ ಬಸವಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಕೆ.ಆರ್.ಸುನೀತಾ ಅವರು ಹೊಸನಗರ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಮಾರು 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು 2008ರಲ್ಲಿ ಶಿಕ್ಷಕ ವೃತ್ತಿ ಆರಂಭವಾಗಿತ್ತು. ಮೊದಲು ಕಳಸೆ ಶಾಲೆಯಲ್ಲಿ 6 ವರ್ಷಗಳು ಸೇವೆ ಸಲ್ಲಿಸಿ ನಂತರ ಬಸವಾಪುರ ಶಾಲೆಗೆ ವರ್ಗಾವಣೆಯಾಗಿ 9 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ಹಾಗೂ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರನ್ನು ತಯಾರು ಮಾಡುವುದರ ಜೊತೆಗೆ ಶಾಲೆಯಲ್ಲಿ ಉತ್ತಮ ಬೋಧನೆಯನ್ನು ಮಾಡುತ್ತಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ವಿಧ್ಯಾರ್ಥಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರ ಈ ಕರ್ತವ್ಯ ನಿಷ್ಟೆಗೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.