

ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಕೆ.ಆರ್.ಪೇಟೆ : ರೈತಪರ ಹೋರಾಟಕ್ಕೆ ನಮ್ಮ ಪಕ್ಷ ಸದಾ ಸಿದ್ಧ ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕೆ.ಆರ್.ಪೇಟೆಯ ಟಿಎಪಿಸಿಎಂಎಸ್ ಆವರಣದಲ್ಲಿ ಜಾದಳ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಇದು ಕೇವಲ ವಿರೋಧ ಪಕ್ಷದ ಶಾಸಕರು ಮಾಡುವ ಆರೋಪ ಅಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿ.ಆರ್.ಪಾಟೀಲ್ ಅವರಂತಹ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಪಕ್ಷದ ವಿರುದ್ಧ ದನಿ ಎತ್ತುತ್ತಿದ್ದಾರೆ. ಅನುದಾನಕ್ಕಾಗಿ ಆಡಳಿತ ಪಕ್ಷದ ಶಾಸಕರೇ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ರಸ್ತೆ, ಚರಂಡಿ ರಿಪೇರಿ, ಶಿಥಿಲವಾದ ಶಾಲೆಗಳ ಮರು ನಿರ್ಮಾಣಕ್ಕೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲೂ ಸರ್ಕಾರದಲ್ಲಿ ಹಣ ಇಲ್ಲ ಎಂದು ನಿಖಿಲ್ ಟೀಕಿಸಿದರು.
ಲಾಟರಿ ಸಿ.ಎಂ:
‘ನಾನು ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದೆ. ಸಿದ್ದರಾಮಯ್ಯ ಲಾಟರಿ ಸಿ.ಎಂ. ಆಗಿದ್ದಾರೆ’ ಎಂದು ಈಗಷ್ಟೇ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಜೆಡಿಎಸ್‌ನವರು ಸಿದ್ದರಾಮಯ್ಯ ಅವರಿಂದ ಏನನ್ನೂ ಕಲಿಯಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಅವರು ಮೊದಲು ಸರಿಪಡಿಸಿಕೊಳ್ಳಲಿ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಯಾವತ್ತೂ ಜೆಡಿಎಸ್ ಬಲ ಕುಂದಿಲ್ಲ ಎಂದು ನಿಖಿಲ್ ಹೇಳಿದರು.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಅನ್ನದಾನಿ, ಸುರೇಶ್ ಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲೂಕು ಅಧ್ಯಕ್ಷ ಜಾನಕೀ ರಾಂ, ಮೈಸೂರಿನ ಮಾಜಿ ಮೇಯರ್ ರವಿ, ಮುಖಂಡರಾದ ಅಶೋಕ್, ಮಲ್ಲೇನಹಳ್ಳಿ ಮೋಹನ್, ಶೀಳನೆರೆ ಮೋಹನ್, ವಿ.ಎಂ.ಮಹದೇವೇಗೌಡ, ಬಿ.ಎಂ. ಕಿರಣ್, ಅಕ್ಕಿಹೆಬ್ಬಾಳು ರಘು, ಗದ್ದೆ ಹೊಸೂರು ಅಶ್ವಿನ್ ಕುಮಾರ್, ಎಚ್.ಟಿ.ಲೋಕೇಶ್, ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ಇತರರು ಇದ್ದರು.
ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ:
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.