

ಕೆ.ಆರ್.ನಗರ: ಅವಧಿ ಮುಗಿದಿರುವ ತಾಲೂಕು ಒಕ್ಕಲಿಗರ ಸಂಘಕ್ಕೆ ಅಡಾಕ್ ಕಮಿಟಿ ರಚನೆ ಮಾಡಿ ಹಳೆಯ ಲೆಕ್ಕಪತ್ರ ಸಲ್ಲಿಸಬೇಕು, ಇಲ್ಲವಾದರೆ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡರ ವಿರುದ್ಧ ಸಮುದಾಯ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ರಾಜ್ಯ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ತಾಲೂಕು ಒಕ್ಕಲಿಗರ ಸಂಘಕ್ಕೆ ಚುನಾವಣೆಯೇ ನಡೆಸದೆ ತಮಗಿಷ್ಟ ಬಂದವರನ್ನು ಆಡಳಿತ ಮಂಡಳಿಗೆ ಅನಧಿಕೃತವಾಗಿ ನೇಮಿಸಿಕೊಳ್ಳುವ ಮೂಲಕ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಒಕ್ಕಲಿಗರ ಸಂಘ ಸ್ಥಾಪನೆಗೂ ಮುನ್ನವೇ ಸಮುದಾಯದ ಹಿರಿಯರಾದ ಮಾಜಿ ಸಚಿವ ಎಸ್.ನಂಜಪ್ಪ, ರಾಮೇಗೌಡ ಸೇರಿದಂತೆ ಇನ್ನಿತರರು ಸಮುದಾಯಕ್ಕೆ ಸೂಕ್ತ ಜಾಗವನ್ನು ಪಡೆದು ಆಸ್ತಿ ಮಾಡಿದ್ದಾರೆ. ಆ ಜಾಗದಲ್ಲಿ ಇಂದು ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಉತ್ತಮ ಸಮುದಾಯ ಭವನ ನಿರ್ಮಿಸಿ ಸಮಾಜಕ್ಕೆ ಅನುಕೂಲ ಕಲ್ಪಿಸಲಾಗಿದೆಯೇ ಹೊರತು ಇದಕ್ಕೆ ಎಂ.ಟಿ.ಅಣ್ಣೇಗೌಡರ ಕೊಡುಗೆ ಏನು ಇಲ್ಲ ಎಂದು ಹೇಳಿದರು.
ಮೊದಲ ಅವಧಿಗೆ ಅಧಿಕಾರಕ್ಕೆ ಬಂದ ಎಂ.ಟಿ.ಅಣ್ಣೇಗೌಡ ನೇತೃತ್ವದ ಆಡಳಿತ ಮಂಡಳಿ ಅವಧಿ ಮುಗಿದು ಹತ್ತಾರು ವರ್ಷಗಳೇ ಕಳೆದಿವೆ. ಆದರೂ ಸಂಘಕ್ಕೆ ಚುನಾವಣೆ ಮಾಡಿಲ್ಲ. ಕೋರ್ಟ್‌ನಲ್ಲಿ ಸ್ಟೇ ತಂದು ಹಿಂದಿನ ಆಡಳಿತ ಮಂಡಳಿ ಜತೆಗೆ ನಿಧನರಾದ ಪದಾಧಿಕಾರಿಗಳ ಸ್ಥಾನಕ್ಕೆ ತಮಗಿಷ್ಟ ಬಂದವರನ್ನು ಸೇರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ ಸಂಘದ ಹಾಗೂ ದೇವೇಗೌಡ ಸಮುದಾಯ ಭವನದ ಆದಾಯ ಖರ್ಚು-ವೆಚ್ಚಗಳ ಬಗ್ಗೆ ಲೆಕ್ಕ ಕೊಡದೆ ಸುಳ್ಳು ಲೆಕ್ಕ ತೋರಿಸುತ್ತಿದ್ದಾರೆ. ಇದನ್ನು ಕೇಳಿದವರ ಮೇಲೆ ಇಲ್ಲಸಲ್ಲದ ಅಪಾದನೆ ಹೊರಿಸುವುದು, ಅವರನ್ನು ಆಡಳಿತದಿಂದ ಕೈ ಬಿಡುವಂತಹ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ನೇತೃತ್ವದಲ್ಲಿ ಸಮಾಜದ ಹಿರಿಯ ಮುಖಂಡರು ಹಾಗೂ ಸಮಾಜದ ಜನರ ಸಭೆಯನ್ನು ಇನ್ನು ಹದಿನೈದು ದಿನಗಳ ಒಳಗೆ ಕರೆದು ಸಂಘಕ್ಕೆ ಸಮಿತಿ ರಚಿಸಿ ಲೆಕ್ಕ ಪತ್ರ ನೀಡಿ ಮುಂದಿನ ಯುವಕರಿಗೆ ಸಂಘ ಮುನ್ನಡೆಸಿಕೊಂಡು ಹೋಗಲು ಅವಕಾಶ ನೀಡಿ ಗೌರವಯುತವಾಗಿ ನಡೆದುಕೊಳ್ಳಿ, ಇಲ್ಲವಾದರೆ ನೀವು ಮಾಡಿರುವ ಲೋಪಗಳನ್ನು ಇಟ್ಟುಕೊಂಡು ನಿಮ್ಮ ಮೇಲೆ ಸಮುದಾಯ ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿ, ಹಿರಿಯರು ಮತ್ತು ಮುಖಂಡರು ಸೇರಿ ಕಟ್ಟಿ ಬೆಳೆಸಿಕೊಂಡು ಬಂದಿರುವ ಈ ಸಮುದಾಯ ಭವನ ಚೆನ್ನಾಗಿತ್ತು. ಆದರೆ, ನಿರ್ಲಕ್ಷೃದಿಂದ ಸ್ವಚ್ಛತೆ, ಸೂಕ್ತ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿ, ಸಂಘ ಮತ್ತು ದೇವೇಗೌಡ ಸಮುದಾಯ ಭವನ ಅಣ್ಣೇಗೌಡರ ಆಸ್ತಿಯಲ್ಲ. ಅದು ಸಮುದಾಯದ ಆಸ್ತಿ. ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನಿಸಬಾರದೆಂಬ ಉದ್ದೇಶದಿಂದ ಅವಧಿ ಮುಗಿದಿದ್ದರೂ ಇಲ್ಲಿಯವರೆಗೆ ಸುಮ್ಮನಿದ್ದಾರೆ. ಆದರೆ, ಇನ್ನು ಮುಂದೆ ಅದು ನಡೆಯುವುದಿಲ್ಲ. ಜನ ತಿರುಗಿ ಬೀಳುವ ಮೊದಲು ನಿಮ್ಮ ಜವಾಬ್ದಾರಿ ಬಿಟ್ಟುಕೊಡಿ ಎಂದು ಸೂಚಿಸಿದರು.
ತಾಲೂಕು ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಉಪಾಧ್ಯಕ್ಷ ವಿ.ಸಿ.ಶಿವರಾಮು ಮಾತನಾಡಿ, ಈಗ ಪ್ರಸ್ತುತ ಇರುವ ಸಂಘವೇ ಅಕ್ರಮವಾದದ್ದು. ಇದನ್ನು ವಿಸರ್ಜಿಸಿ ಚುನಾವಣೆಗೆ ಅವಕಾಶ ಮಾಡಿಕೊಡದೆ ಹೋದರೆ ನಾವು ಕಾನೂನು ಮೂಲಕ ವಜಾಗೊಳಿಸಲು ಕ್ರಮ ವಹಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ತಾಲೂಕು ಒಕ್ಕಲಿಗರ ಸಂಘದ ಕಾನೂನು ಸಲಹೆಗಾರ ಅಂಕನಹಳ್ಳಿ ತಿಮ್ಮಪ್ಪ, ಎಪಿಎಂಸಿ ಮಾಜಿ ಸದಸ್ಯ ಅನಿಲ್, ಮುಖಂಡರಾದ ರಾಧಾಕೃಷ್ಣ, ಕೇಶವ್, ಹೆಬ್ಬಾಳು ಸುಜಯ್, ರಮೇಶ್, ರವಿಕುಮಾರ್, ಅನಿಲ್‌ಗೌಡ, ಶಂಭು, ಯೋಗೇಶ್, ರಾಮಕೃಷ್ಣೇಗೌಡ, ಕೋಳಿರಾಜು, ರವಿ, ಹೆಬ್ಬಾಳು ಹರೀಶ್, ಎಂ.ಪಿ.ದರ್ಶನ್ ಇತರರು ಇದ್ದರು.