ಉಪ ಲೋಕಾಯುಕ್ತರೆದುರು ಕೆ.ಆರ್. ಆಸ್ಪತ್ರೆ ಅವ್ಯವಸ್ಥೆ ಅನಾವರಣ

KR Hospital
Published on

ಮೈಸೂರು: ಕೆ.ಆರ್. ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆ ಕಾಣುತ್ತಿದ್ದು, ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಜತೆಗೆ ಹಲವು ಹಲವು ಶಿಫಾರಸುಗಳನ್ನು ಮಾಡಲಾಗುವುದು ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.

ಕೆ.ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ರೋಗಿಗಳ ಕುಂದುಕೊರೆಗಳನ್ನು ಆಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯ ನವೀಕರಣ ಕಾಮಗಾರಿ ಇದೀಗ ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ ದುರಸ್ತಿ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ಗೋಡೆಯಲ್ಲಿ ನೀರು ಹರಿದು ಗೋಡೆಗಳು ಹಾಳಾಗಿವೆ. ಹೀಗಾಗಿ ಕಟ್ಟಡಗಳ ನಿರ್ವಹಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ರೋಗಿಗಳನ್ನು ನೋಡಿಕೊಳ್ಳಲು ಬರುವವರಿಗೆ ಆಸ್ಪತ್ರೆಯಲ್ಲಿ ಕೂರಲು ಸೂಕ್ತವಾದ ವ್ಯವಸ್ಥೆ ಇಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಶುಚಿತ್ವ ಕಾಪಾಡದೆ ಇರುವುದು ಕಂಡು ಬಂತು. ಶುಚಿತ್ವ ಕಾಪಾಡುವಂತೆ ಡೀನ್ ಹಾಗೂ ವೈದ್ಯರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಬಡವರು,ಮಧ್ಯಮ ವರ್ಗಗಳ ರೋಗಿಗಳು ಚಿಕಿತ್ಸೆಗೆ ದಾಖಲಾಗುವ ಕೆ.ಆರ್.ಆಸ್ಪತ್ರೆುಂ ಒಳಗೆ ಮತ್ತು ಹೊರಗಿನ ಆವರಣದಲ್ಲಿ ಶುಚಿತ್ವ ಕಾಪಾಡದೆ ಅನೈರ್ಮಲ್ಯದ ವಾತಾವರಣ ತಾಂಡವವಾಡುತ್ತಿರುವ ಕುರಿತು ಕಣ್ಣಾರೆ ಕಂಡ ಉಪ ಲೋಕಾುುಂಕ್ತ ಕೆ.ಎನ್.ಫಣೀಂದ್ರ ಅವರು ತೀವ್ರ ಅಸವಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯ ರೋಗಿಗಳೊಂದಿಗೆ ಮಾತುಕತೆ ನಡೆಸಿ ವೈದ್ಯರು ಹಾಗೂ ದಾದಿಯರು ವೈದ್ಯಕೀಯ ಸೇವೆಗೆ ಹಣ ಪಡೆಯುತ್ತಿದ್ದಾರೆಯೇ ? ನಿಮಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆಯೇ ಎಂದು ವಿಚಾರಿಸಿಕೊಂಡರು. ಕೆಲವು ರೋಗಿಗಳು ಆಸ್ಪತ್ರೆಯ ವ್ಯವಸ್ಥೆಯ ಕುರಿತು ಮಾತನಾಡಲು ಹಿಂದೇಟು ಹಾಕಿದರು. ಇನ್ನು ಕೆಲವರು ಆಸ್ಪತ್ರೆಯ ಅವ್ಯವಸ್ಥೆಯನ್ನು ತೆರೆದಿಡುವ ಪ್ರಯತ್ನ ಮಾಡಿದರು.

‘ಟೀ ಕಾಫಿ ತರಲು, ಸ್ಕಾೃನಿಂಗ್ ಮಾಡಲು ನಮ್ಮನ್ನು ಹೊರಗೆ ಕಳುಹಿಸುತ್ತಾರೆ. ಕೆಲವರು ಹಣಕ್ಕೆ ಬೇಡಿಕೆ ಇಡುತ್ತಾರೆ. ಕೆಲವು ದುಬಾರಿ ಔಷಧವನ್ನು ಹೊರಗಿನಿಂದಲೇ ಖರೀದಿಸಬೇಕಾಗುತ್ತದೆ. ರೋಗಿ ಜತೆ ಸಹಾಯಕರಾಗಿ ಹೆಣ್ಣು ಮಕ್ಕಳು ಆಗಮಿಸಿದರೆ ರಾತ್ರಿ ವೇಳೆ ಅವರು ಹೊರ ಹೋಗಿ ಔಷಧ ತರಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಯಲ್ಲಿಯೇ ಎಲ್ಲ ರೀತಿಯ ಔಷಧ ದೊರೆಯುವಂತೆ ಮಾಡಿದರೆ ಉತ್ತಮ’ ಎಂದು ರೋಗಿಗಳ ಸಂಬಂಧಿಕರು ಹೇಳಿದರು. ಕೆಲವು ರೋಗಿಗಳು ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದರು.

ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಆರೋಗ್ಯ ಹಾಗೂ ವೈದ್ಯಕೀಯ ಸೇವೆಯ ಕುರಿತು ವಿಚಾರಿಸಿದರು. ಹೆರಿಗೆ ಸಂದರ್ಭ ವೈದ್ಯರು ಹಣ ಕೇಳಿದರೇ? ವೈದ್ಯಕೀಯ ಸೇವೆ ಉತ್ತಮವಾಗಿ ದೊರೆಯುತ್ತಿದೆಯೇ ಎಂದು ಉಪ ಲೋಕಾಯುಕ್ತರು ಪ್ರಶ್ನಿಸಿದರು. ‘ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ನನ್ನ ಬಳಿ ಹೇಳಿಕೊಳ್ಳಿ, ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಎಲ್ಲ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಮಸ್ಯೆ ನುಂಗಿಕೊ ಂಡು ಕುಳಿತರೆ ಮತ್ತಷ್ಟು ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net