ಸರ್ಕಾರಿ ಕೆಲಸ ಸಿಕ್ಕರೂ ಖುಷಿ ಪಡೋಕ್ಕಾಗ್ತಿಲ್ಲ ; ಮೂಲ ದಾಖಲೆ ಕೊಟ್ಟಾಯ್ತು, ಬೇರೆ ಉದ್ಯೋಗಕ್ಕೂ ಅಡ್ಡಿಯಾಯ್ತು

kpsc
Published on

ತುಮಕೂರು:ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ವಿವಿಧ ಇಲಾಖೆಗಳಿಗೆ 661 ಬೆರಳಚ್ಚುಗಾರರ ಹುದ್ದೆಗಳ ನೇರ ನೇಮಕಾತಿಗೆ 2016ರಲ್ಲಿ ಅಧಿಸೂಚನೆ ಹೊರಡಿಸಿ ಐದುವರ್ಷಗಳ ಬಳಿಕ ಅಂತಿಮ ಆಯ್ಕೆ ಪಟ್ಟಿ ಕೂಡ ಪ್ರಕಟಿಸಿತ್ತು. ಇವರಲ್ಲಿ 531 ಮಂದಿ ಸೇವೆಗೆ ಸೇರ್ಪಡೆಯಾಗಿದ್ದರೆ 124 ಮಂದಿಗೆ ಇನ್ನೂ ನೇಮಕಾತಿ ಪತ್ರ ಸಿಕ್ಕಿಲ್ಲ.

ಸರ್ಕಾರದ ವಿವಿಧ ಇಲಾಖೆಗಳಿಗೆ 2016ರಲ್ಲಿ 661 ಬೆರಳಚ್ಚುಗಾರರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅಂತೂ ಇಂತು 4 ವರ್ಷಗಳ ಬಳಿಕ ಅಭ್ಯರ್ಥಿಗಳ ಮೆರಿಟ್, ಮೀಸಲು ಆಧರಿಸಿ ನವೆಂಬರ್ 2019ರಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಹಾಗೂ ಆಯಾ ಇಲಾಖಾವಾರು ಪಟ್ಟಿಯನ್ನು ಅದೇವರ್ಷ ಡಿಸೆಂಬರ್‌ನಲ್ಲೇ ಕೆಪಿಎಸ್ಸಿ ಕಳುಹಿಸಿತ್ತು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 124 ಮಂದಿಗಿನ್ನೂ ಸರ್ಕಾರಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಾದೇಶಿಕ ಸಾರಿಗೆ ಕಚೇರಿ, ಪಶುಸಂಗೋಪನೆ, ರೇಷ್ಮೆ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪತ್ರ ನೀಡಲು ಮೀನಮೇಷ ಎಣಿಸುತ್ತಿವೆ. ಸರ್ಕಾರದ ಯಾವುದೇ ನೇಮಕಾತಿ ಪ್ರಕ್ರಿಯೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ವರ್ಷದೊಳಗೆ ನೇಮಕಾತಿ ಆದೇಶ ನೀಡಬೇಕೆಂಬುದು ಸರ್ಕಾರದ ಅಧಿಕೃತ ಆದೇಶವಿದ್ದು ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿರೊ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಸಿಕ್ಕದೆ ಇರುವುದರಿಂದ ಆತಂಕಕ್ಕೊಳಗಾಗಿದ್ದಾರೆ.

ಕರೊನಾ ನೆಪ: 661 ಬೆರಳಚ್ಚುಗಾರರಲ್ಲಿ 531 ಮಂದಿಗೆ ಮೂಲದಾಖಲಾತಿ, ಸಿಂಧುತ್ವ, 371(ಜೆ), ಅಂಕಪಟ್ಟಿಗಳ ನೈಜತೆ ಪರಿಶೀಲನೆ ಮಾಡಿ ಬಹುತೇಕ ಇಲಾಖೆಗಳು ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳವರೆಗೆ ನೇಮಕಾತಿ ಆದೇಶ ನೀಡಿವೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿ 8 ಇಲಾಖೆಗಳು ಕರೊನಾ ನೆಪವೊಡ್ಡುತ್ತಿವೆ.

5 ವರ್ಷಗಳಿಂದ ಕಾದು ಸಿಕ್ಕಿರುವ ಉದ್ಯೋಗಕ್ಕೆ ಆಯ್ಕೆಯಾದರೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿಲ್ಲ. ಅಂಕಪಟ್ಟಿ ಸೇರಿ ಮೂಲದಾಖಲಾತಿಗಳನ್ನು ನೀಡಿರುವುದರಿಂದ ಬೇರೆ ಉದ್ಯೋಗಗಳಿಗೂ ಸೇರಲಾಗುತ್ತಿಲ್ಲ. ಇನ್ನು ವಯೋಮಿತಿ ಮೀರುವ ಜತೆಗೆ ಸೇವಾವಧಿ ಕೈತಪ್ಪಿ ಹೋಗಲಿದೆ ಎಂಬ ಆತಂಕ ಇದೆ. ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ಕೆಪಿಎಸ್ಸಿ ಮೂಲಕ ನಮ್ಮ ಇಲಾಖೆಗೆ 40 ಬೆರಳಚ್ಚುಗಾರರು, 8 ಎಫ್‌ಡಿಎಗಳು ಆಯ್ಕೆಯಾಗಿದ್ದು ಕರೊನಾ ಹಿನ್ನೆಲೆಯಲ್ಲಿ ಸರ್ಕಾರಿ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ನೇಮಕಾತಿ ಆದೇಶ ನೀಡಲಾಗಿಲ್ಲ. ಬೇರೆ ಇಲಾಖೆಗಳಲ್ಲಿ ಇತ್ತೀಚೆಗೆ ನೇಮಕಾತಿಗೆ ಅವಕಾಶ ಕೊಟ್ಟಿರುವುದರಿಂದ ಇನ್ನೆರಡು ದಿನಗಳಲ್ಲಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯಲಾಗುವುದು. ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net