ಕೆಪಿಎಸ್ಸಿ ಚೆಲ್ಲಾಟ, ಉದ್ಯೋಗಾಕಾಂಕ್ಷಿಗಳಿಗೆ ಸಂಕಟ ! ; 4 ವರ್ಷವಾದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ;  ಜೆಟಿಒ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಭ್ರಮನಿರಸನ

kpsc
Published on

ತುಮಕೂರು : ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆ ನಿರೀಕ್ಷೆಯಲ್ಲಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ವಿಳಂಬ ಧೋರಣೆ ಭ್ರಮನಿರಸನ ಮೂಡಿಸಿದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯೋಗಾಲಯದಲ್ಲಿನ 1520 ಜೆಟಿಒ ಹುದ್ದೆಗಳಿಗೆ 2018ರಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಅರ್ಹತಾ ಪಟ್ಟಿಯಲ್ಲಿರುವ ಆಕಾಂಕ್ಷಿಗಳಿಗೆ ಕೆಪಿಎಸ್ಸಿ ನಡೆ ಉದ್ಯೋಗ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.

ನೇಮಕಾತಿಗೆ 2018ರ ಫೆಬ್ರವರಿ 19 ರಂದು ಅರ್ಜಿ ಆಹ್ವಾನಿಸಲಾಗಿತ್ತು. ಅದೇ ವರ್ಷ ಲಿಖಿತ ಪರೀಕ್ಷೆ ನಡೆಸಿ, 2019 ಸೆಪ್ಟೆಂಬರ್‌ನಲ್ಲಿ ಅರ್ಹತಾ ಪಟ್ಟಿ ಪ್ರಕಟಿಸಿತ್ತಲ್ಲದೆ, ಎರಡೇ ತಿಂಗಳಲ್ಲಿ 1:3ರ ಅನುಪಾತದಲ್ಲಿ ಮೂಲ ದಾಖಲಾತಿ ಪರಿಶೀಲನೆ ನಡೆಸಿತ್ತು. ಆದರೆ, 3 ವರ್ಷ ಆದರೂ ಸಬೂಬು ಹೇಳುತ್ತಲೇ ಬಂದಿದೆ. ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ 266 ಹಾಗೂ ಉಳಿದ ವೃಂದದ 1254 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ.

ಬತ್ತಿದ ಭರವಸೆ : ಐಟಿಐ ವೃತ್ತಿಗೆ ಅನ್ವಯಿಸುವ ಡಿಪ್ಲೊಮಾ ಕೋರ್ಸ್ ವಿದ್ಯಾರ್ಹತೆಯುಳ್ಳವರು ಜೆಟಿಒ ಹುದ್ದೆಗೆ ಅರ್ಹರಾಗಿರುವ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಭರವಸೆಯೇ ಬತ್ತಿ ಹೋಗಿದೆ. ಕೆಪಿಎಸ್ಸಿ ಚೆಲ್ಲಾಟದಿಂದ ಪ್ರಾಣ ಸಂಕಟ ಅನುಭವಿಸುತ್ತಿರುವ ಸಾವಿರಾರು ನಿರುದ್ಯೋಗಿಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ.

ವೆಬ್‌ಸೈಟ್‌ನಲ್ಲಿ ಸಿದ್ಧ ಉತ್ತರ : ಇಂದು, ನಾಳೆ ಪ್ರಾವಿಷನಲ್ ಲಿಸ್ಟ್ ಬಿಡುತ್ತಾರೆಂದು ಪ್ರತಿದಿನ ಕೆಪಿಎಸ್ಸಿ ವೆಬ್‌ಸೈಟ್ ಇಣುಕುವ ಉದ್ಯೋಗಾಂಕ್ಷಿಗಳಿಗೆ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಿ ಅನುಮೋದನೆಗಾಗಿ ಆಯೋಗಕ್ಕೆ ಸಹಿ ಕಳುಹಿಸಲಾಗಿದೆ ಎಂಬ ಸಿದ್ಧ ಉತ್ತರ ಸಿಗಲಿದೆ. ಕಳೆದ 6 ತಿಂಗಳಿನಿಂದ ಈ ಸಿದ್ಧ ಉತ್ತರ ನೋಡಿ ಬೇಸತ್ತಿರುವ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಕಟ್ಟೆ ಹೊಡೆದಿದೆ.

4 ವರ್ಷಗಳಿಂದ ಇಂದಲ್ಲ, ನಾಳೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆಂದು ಕಾಯುತ್ತಿದ್ದೇವೆ. ಕೆಪಿಎಸ್ಸಿ ವೆಬ್‌ಸೈಟ್‌ನಲ್ಲಿ 5-6 ತಿಂಗಳಿನಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಿ ಆಯೋಗದ ಅನುಮತಿಗೆ ಕಳುಹಿಸಲಾಗಿದೆ ಎಂಬ ಸಿದ್ಧ ಉತ್ತರ ನೀಡಲಾಗಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಯಾವಾಗ. ಹೆಸರು ಹೇಳಲಿಚ್ಛಿಸದ ಉದ್ಯೋಗಾಕಾಂಕ್ಷಿ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net