

ರಾವಂದೂರು: ಇಲ್ಲಿನ ಕೆಪಿಎಸ್ ಶಾಲೆಯು ಜಿಲ್ಲೆಯಲ್ಲಿಯೇ ಹೆಚ್ಚು ದಾಖಲಾತಿಯಲ್ಲಿ ಬೇಡಿಕೆ ಹೊಂದಿದೆ ಎಂದು ಪ್ರಾಂಶುಪಾಲ ಕೆ.ಎಂ.ಶಿವಶಂಕರ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಕೆಪಿಎಸ್ ಶಾಲೆಯ ಎಲ್.ಕೆ.ಜಿ. ತರಗತಿಗೆ ಪ್ರವೇಶಾತಿ ಬಯಸಿದ ಮಕ್ಕಳ ಬೇಡಿಕೆ ಹೆಚ್ಚಾದ ಕಾರಣ ಇದೇ ಮೊದಲ ಬಾರಿಗೆ ಲಾಟರಿ ಮೂಲಕ ಸೋಮವಾರ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದರು.
ಒಟ್ಟು 130 ವಿದ್ಯಾರ್ಥಿಗಳು ದಾಖಲಾತಿ ಬಯಸಿ ಅರ್ಜಿ ಸಲ್ಲಿಸಿದ್ದು, ನಮ್ಮ ಶಾಲೆಗೆ 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಹೀಗಾಗಿ 38 ಸ್ಥಳೀಯ ವಿದ್ಯಾರ್ಥಿಗಳನ್ನು ಬಿಟ್ಟು ಉಳಿಕೆ ವಿದ್ಯಾರ್ಥಿಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ 92 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಲಾಟರಿ ಮೂಲಕ 22 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಎಂದರು.
ಕೆಪಿಎಸ್ ಶಾಲೆಗಳ ಉಪಾಧ್ಯಕ್ಷ ಆರ್.ವಿ.ವಿಶ್ವನಾಥ್, ಗ್ರಾಪಂ ಅಧ್ಯಕ್ಷೆ ಸುಜಾತಾ ವಾಸು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿಜಿ, ಜಲೇಂದ್ರ, ಕೀರ್ತಿ, ರಾಜೇಂದ್ರ, ಮುಖಂಡರಾದ ಡಿ.ಎಸ್.ನಂದೀಶ್, ಮುಖ್ಯ ಶಿಕ್ಷಕಿ ಲಿಲ್ಲಿಮೇರಿ ಇತರು ಇದ್ದರು.