

ಚನ್ನಗಿರಿ: ಡಾ.ಪುನೀತ್ ರಾಜ್ಕುಮಾರ್ ಚಲನಚಿತ್ರ ನಟನೆಯಲ್ಲಿ ಹೆಸರು ಗಳಿಸಿದ್ದಲ್ಲದೆ ಸಾಮಾಜಿಕವಾಗಿ, ದಾನಧರ್ಮಗಳಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೆಪಿಎಸ್ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಹಾಗೂ ಅಭಿಮಾನಿ ಉಜ್ಜನಪ್ಪ ಹೇಳಿದರು.
ತಾಲೂಕಿನ ಸಂತೇಬೆನ್ನೂರು ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಡಾ.ಪುನೀತ್ ರಾಜ್ಕುಮಾರ್ ಅವರ ಜನ್ಮದಿನಕ್ಕೆ ಸಿಹಿ ಹಂಚಿ ಮಾತನಾಡಿದರು.
ಆರು ತಿಂಗಳು ಮಗುವಾಗಿದ್ದಾಗ ನಟನೆ ಪ್ರಾರಂಭಿಸಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಬಾಲ ನಟನಾಗಿ, ಹಿರಿಯ ನಟನಾಗಿ ಹಾಗೂ ನಾಯಕ ನಟನಾಗಿ ಅಭಿನಯಿಸಿ ಹೆಸರು ಮಾಡಿದ್ದಾರೆ. 39 ವೃದ್ಧಾಶ್ರಮ, 29 ಅನಾಥಾಶ್ರಮ, 16 ಗೋಶಾಲೆ ಹಾಗೂ 1800 ಮಕ್ಕಳಿಗೆ ತಮ್ಮ ಜಾಹೀರಾತಿನಿಂದ ಬರುವ ಹಣವನ್ನು ನೀಡಿ ದಾನಕ್ಕೆ ಸಾರ್ಥಕತೆ ತಂದ ಮಹಾನ್ ವ್ಯಕ್ತಿ. ಇವರ ನಿಸ್ವಾರ್ಥ ಭಾವನೆ ಇಂದು ನಮಗೆಲ್ಲ ಮಾದರಿಯಾಗಿದೆ ಎಂದರು.
ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕ ಮಂಜುನಾಥ್ ಏಕಾಭಿನಯ ಪಾತ್ರ ಮಾಡಿದರು. ಮುಖ್ಯ ಶಿಕ್ಷಕ ಎಚ್.ಎನ್.ರವಿ, ಪಾಪಯ್ಯ, ಎಂ.ಬಿ.ನಾಗರಾಜ್, ವೀರಭದ್ರಪ್ಪ, ಅಂಜಲಿದೇವಿ, ಯಾಸ್ಮೀನ್, ಭವಾನಿ, ಸುಧಾರಾಣಿ, ಜ್ಯೋತಿ ಹಾಗೂ ಶಿಕ್ಷಕ ವೃಂದ ಇದ್ದರು.