

ಮೈಸೂರು: ಶ್ರೀಮಂತರ ಹಿತಕಾಯಲು ದೇಶದ ರೈತರನ್ನು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ದೂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್ ದೂರಿದರು.
ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ಬುದ್ಧ ವಿಹಾರ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣೆಗೂ ಮುನ್ನ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವುದಾಗಿ ದೇಶದುದ್ದಕ್ಕೂ ಭಾಷಣ ಮಾಡಿ ಬಿಜೆಪಿ ಅಧಿಕಾರಕ್ಕೆ ಏರಿತು. ಆದರೆ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದರೂ ವರದಿ ಜಾರಿ ಮಾಡದೆ ರೈತರನ್ನು ಮರೆತಿರುವ ಪ್ರಧಾನಿ ನರೇಂದ್ರ ಮೋದಿ. ಅದಾನಿ-ಅಂಬಾನಿಯಂತ ಶ್ರೀಮಂತರಿಗಾಗಿ ದೇಶ ಲೂಟಿ ಮಾಡಲು ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಮೂಲಕ ಶ್ರೀಮಂತರನ್ನು ಹಿತಕಾಯಲು ರೈತರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಒಂದೆಡೆ ಬೆಳೆಗಳಿಗೆ ಬೆಲೆ ಇಲ್ಲದೆ, ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಮತ್ತೊಂದೆಡೆ ಇದೇ ಶ್ರೀಮಂತ ಕಂಪನಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಉಪಕರಣ, ಬಿತ್ತನೆ, ಗೊಬ್ಬರ ಸೇರಿದಂತೆ ಇನ್ನಿತರ ಬೆಲೆ ಏರಿಸಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ಇಂತಹ ರೈತ ವಿರೋಧಿ ನೀತಿಗಳ ವಿರುದ್ಧ ರೈತರು ಸಂಘಟಿತರಾಗಿ ಹೋರಾಟಕ್ಕೆ ಮಾಡದಿದ್ದರೆ ಮುಂದೆ ರೈತ ಸಂತತಿಯೇ ನಾಶವಾಗಿ ನಮ್ಮ ಭೂಮಿಯಲ್ಲಿ ನಾವೇ ಜೀತಗಾರರಾಗಬೇಕಾದ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕೃಷಿ ಮಾಡಲು ರೈತರಿಗೆ ಅಗತ್ಯವಾಗಿ ಬೇಕಿರುವುದು ಭೂಮಿ. ನಮ್ಮ ದೇಶದಲ್ಲಿ ಕೃಷಿ ಬಗ್ಗೆ ಜ್ಞಾನವಿದ್ದರೂ ಭೂಮಿ ಇಲ್ಲದೆ ಕೃಷಿ ಜ್ಞಾನ ಇಲ್ಲದ ಭೂ ಮಾಲಿಕರ ಭೂಮಿಯಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
5 ಗುಂಟೆಯಿಂದ 3 ಎಕರೆ ಭೂಮಿಯಲ್ಲಿ ಯಾವುದೇ ಆಧಾರವಿಲ್ಲದೆ 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡದೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ರೈತರಿಗೆ ನೀಡಿ ಅವರಿಗೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿದರು.
ಕಂಪನಿ ಮಾಡಲು ಫಲವತ್ತಾದ ಭೂಮಿ ನೀಡುವ ಸರ್ಕಾರ ಬಡ ರೈತರಿಗೆ ಹಕ್ಕು ಪತ್ರ ನೀಡದೆ ವಂಚಿಸುತ್ತಿದೆ. ಆಳುವ ಸರ್ಕಾರದ ಇಂತಹ ಜನ ವಿರೋಧಿ ನೀತಿಗಳ ಬಗ್ಗೆ ರೈತರು ಜಾಗೃತರಾಗಬೇಕು. ಅದಕ್ಕಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜ್, ಜಿಲ್ಲಾ ಖಜಾಂಚಿ ಚಂದ್ರಶೇಖರ್, ಮೈಸೂರು ತಾಲೂಕು ಅಧ್ಯಕ್ಷ ದೂರ ಲೋಕೇಶ್, ಕಾರ್ಯದರ್ಶಿ ಜಯಪುರ ಮಹೇಶ್, ಪಿರಿಯಾಪಟ್ಟಣ ತಾಲೂಕು ಸಂಚಾಲಕ ಕಣಗಾಲು ಲೋಕೇಶ್, ಎಚ್.ಡಿ.ಕೋಟೆ ಕಾರ್ಯದರ್ಶಿ ಪ್ರಶಾಂತ್, ಸರಗೂರು ತಾಲೂಕು ಉಪಾಧ್ಯಕ್ಷ ಕೂಲ್ಯ ಮಹದೇವ, ಮುಖಂಡರಾದ ಸಿದ್ದಯ್ಯ, ಪುಟ್ಟರಾಚ, ಐಚನಳ್ಳಿ ಕುಮಾರ್ ಇತರರು ಇದ್ದರು.