

ಹುಬ್ಬಳ್ಳಿ: ವಿಎಕೆ ಫೌಂಡೇಷನ್ ಪ್ರಾಯೋಜಿತ ಹಾಗೂ ಆರ್ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರುನಾಡು ಪ್ರೀಮಿಯರ್ ಲೀಗ್ (ಕೆಪಿಎಲ್) ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಮತ್ತು ಜರ್ಸಿ ಅನಾವರಣ ಕಾರ್ಯಕ್ರಮ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಿತು.
ಮುಖಂಡರಾದ ಅನಿಲಕುಮಾರ ಪಾಟೀಲ, ವೆಂಕಟೇಶ ಕಾಟವೆ, ರವೀಂದ್ರ ಕಲ್ಯಾಣಿ, ಮಂಜುನಾಥ ಬೆಡಸೂರ, ಬಾಳು ನಾಯಕ, ವೀರೇಶ ಉಂಡಿ, ಪ್ರಾಯೋಜಕರಾದ ರಮೇಶ ಕಾಂಬಳೆ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ಪ್ರತಿ ವರ್ಷದಂತೆ ಈ ವರ್ಷವೂ ಆರ್ಕೆ ಟೈಗರ್ಸ್ ಹಾಗೂ ವಿಎಕೆ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಕರುನಾಡು ಪ್ರೀಮಿಯರ್ ಲೀಗ್ ಉತ್ತರ ಕರ್ನಾಟಕ ಭಾಗದ ಅತ್ಯಂತ ರೋಮಾಂಚನಕಾರಿ ಹಾಗೂ ಯಶಸ್ವಿ ಕ್ರಿಕೆಟ್ ಟೂರ್ನಾಮೆಂಟ್ ಆಗಿದೆ ಎಂದರು.
ಯುವಕರು ಮಾದಕ ದ್ರವ್ಯ ಮತ್ತು ಇತರ ತಪ್ಪು ಮಾರ್ಗಗಳಲ್ಲಿ ತೊಡಗಿಸಿಕೊಳ್ಳುವ ಬದಲು ಆಟಗಳು, ದೈಹಿಕ ಚಟುವಟಿಕೆಗಳು, ಯೋಗಾಸನದಲ್ಲಿ ನಿರತರಾಗುವಂತೆ ಮಾಡಲು ಇಂತಹ ಪಂದ್ಯಾವಳಿ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಯುವಕರಲ್ಲಿ ಕ್ರೀಡಾ ಸ್ಪೂರ್ತಿ ಬೆಳೆಸುವುದು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡುವುದು ವಿಎಕೆ ಫೌಂಡೇಷನ್ ಹಾಗೂ ಆರ್ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಿರಣ ಪವಾರ, ಫೌಂಡೇಷನ್ ಹಾಗೂ ಆರ್ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.