

ಮಡಿಕೇರಿ:
ಜೀವನದಿ ಕಾವೇರಿ ಜನ್ಮಸ್ಥಳ ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಡುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮೂಲಕ ಕೊಡವಾಮೆರ ಕೊಂಡಾಟ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿದೆ.
ತಲಕಾವೇರಿಯನ್ನು ಪುಣ್ಯ ತೀರ್ಥಕ್ಷೇತ್ರವೆಂದು ಮುಂಗಡ ಪತ್ರದಲ್ಲಿ ಘೋಷಿಸಬೇಕು. ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲವನ್ನು ದೇವಾಲಯ ನಗರ ಎಂದು ಸರ್ಕಾರ ಮುಂದಿನ ಮುಂಗಡಪತ್ರದಲ್ಲಿ ಘೋಷಿಸಬೇಕು. ಪಾರಂಪರಿಕ ಧಾರ್ಮಿಕ ಕ್ಷೇತ್ರವಾಗಿ ಮೂಲತನಕ್ಕೆ ಮತ್ತು ಸ್ಥಳೀಯರ ಬದುಕಿಗೆ ಧಕ್ಕೆ ಬಾರದಂತೆ ವಿಶೇಷ ಅಭಿವೃದ್ದಿಯ ಪ್ಯಾಕೇಜ್ ಘೋಷಿಸಬೇಕು.ಕಳೆದ ಹಲವಾರು ತಿಂಗಳುಗಳಿಂದ ರಚಿಸದೆ ಇರುವ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಆದಷ್ಟು ಬೇಗ ರಚಿಸಲು ಸರ್ಕಾರ ಮುಂದಾಗಬೇಕೆಂದು ಎಂದು ಒತ್ತಾಯಿಸುವುದಾಗಿ ಸಂಘಟನೆಯ ಪ್ರಮುಖರಾದ ಚಾಮೇರ ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.