

ರಾಮನಗರ: ಜಾರಿ ನಿರ್ದೇಶನಾಲಯದ ಇಕ್ಕಳದಲ್ಲಿ ಸಿಲುಕಿ ಜೈಲು ಪಾಲಾದ ನಂತರ ಇನ್ನೇನು ರಾಜಕೀಯ ಭವಿಷ್ಯ ಮುಗಿಯಿತು ಎನ್ನುವಾಗಲೇ ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಪುಟಿದೆದ್ದಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶತಮಾನಗಳಷ್ಟು ಇತಿಹಾಸ ಹೊಂದಿರುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಜಿಲ್ಲೆಯ ಮೊದಲಿಗ ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ.
ಹೋರಾಟದ ಮೂಲಕ ರಾಜಕೀಯವಾಗಿ ಮೇಲೆ ಬಂದ ಡಿ.ಕೆ.ಶಿವಕುಮಾರ್, ಒಮ್ಮೆ ಪಕ್ಷದ ವಿರುದ್ಧವೇ ತಿರುಗಿ ಬಿದ್ದು, ತಮ್ಮ ಶಕ್ತಿ ತೋರಿಸಿದ್ದರು. ನಂತರ ರಾಜಕೀಯವಾಗಿ ತಮ್ಮದೇ ಪಟ್ಟುಗಳನ್ನು ಹಾಕುತ್ತಾ ಪ್ರಭಾವಿಯಾಗಿ ರೂಪುಗೊಂಡರು. ಜೈಲಿಗೆ ಹೋಗಿ ಬಂದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ ರಾಜಕೀಯ ಎದುರಾಳಿಗಳಿಗೆ ಆಘಾತ ನೀಡಿದ್ದಾರೆ.
ಹೋರಾಟವೇ ಬದುಕು: ಸಾತನೂರು ಹೋಬಳಿ ದೊಡ್ಡಆಲಹಳ್ಳಿ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿ ಮಗನಾಗಿ 1962ರ ಮೇ15ರಂದು ಜನಿಸಿದ ಡಿ.ಕೆ.ಶಿವಕುಮಾರ್, 1981ರಲ್ಲಿಯೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗ (ಎನ್‌ಎಸ್‌ಯುಐ) ಬೆಂಗಳೂರು ಘಟಕದ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದರು. ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಯುವ ಕಾಂಗ್ರೆಸ್‌ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದ ಡಿಕೆಶಿ, 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ನಾಯಕ ಎಚ್.ಡಿ.ದೇವೇಗೌಡ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡರೂ, ರಾಜಕೀಯ ಬೀಜ ಬಿತ್ತಿದ್ದರು.
ಈ ಸೋಲಿನ ನಂತರ, 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂ.ಗ್ರಾಮಾಂತರ ಜಿಪಂ ಸದಸ್ಯರಾಗಿ ಆಯ್ಕೆಗೊಂಡರು. ನಂತರ 1989ರಲ್ಲಿ ಮತ್ತೆ ಸಾತನೂರಿನಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶ ಪಡೆದ ಡಿ.ಕೆ.ಶಿವಕುಮಾರ್ ಮತ್ತೆಂದೂ ಸೋಲು ನೋಡಲೇ ಇಲ್ಲ. ನಂತರ ಸತತವಾಗಿ 2008ರವರೆಗೂ ಸಾತನೂರು ಕ್ಷೇತ್ರದಲ್ಲಿ ಸರದಾರನಂತೆ ಮೆರೆದ ಡಿ.ಕೆ.ಶಿವಕುಮಾರ್, ಬಂಗಾರಪ್ಪನವರ ಸಚಿವ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗಿ, ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಇದಾದ ನಂತರ ಗೆಲುವುಗಳು ಇವರ ಪರವಾಗಿದ್ದರೂ ರಾಜಕೀಯ ಪಿತೂರಿಗಳಿಂದಾಗಿ 2004ರಿಂದ 2013ರವರೆಗೂ ಅಧಿಕಾರ ವಂಚಿತರಾಗಿಯೇ ಕಾಲ ದೂಡಬೇಕಾಯಿತು.
ನಂತರ ಕ್ಷೇತ್ರ ಮರುವಿಂಗಡಣೆಯಲ್ಲಿ ಸಾತನೂರು ಮಾಯವಾದಾಗ ಕನಕಪುರಕ್ಕೆ ವಲಸೆ ಬಂದು 2008ರಿಂದ ಇಲ್ಲಿಯವರೆಗೂ ಸೋಲಿಲ್ಲದ ಸರದಾರನಂತೆ ಜಯಗಳಿಸುತ್ತಲೇ ಬಂದಿದ್ದಾರೆ. ಇಂಧನ, ಜಲ ಸಂಪನ್ಮೂಲದಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ.
ಪಕ್ಷದ ವಿರುದ್ಧ ನಿಂತಿದ್ದರು: ಚಿಕ್ಕವಯಸ್ಸಿನಲ್ಲಿಯೇ ರಾಜಕೀಯವಾಗಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ 1994ರಲ್ಲಿ ರಾಜಕೀಯ ಸಂಚು ನಡೆದಿತ್ತು. ಸಾತನೂರಿನಿಂದ ಸ್ಪರ್ಧೆ ಮಾಡಲು ಡಿಕೆಶಿಗೆ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಆದರೆ ವರಿಷ್ಠರ ತೀರ್ಮಾನದ ವಿರುದ್ಧ ತಿರುಗಿ ಬಿದ್ದ ಡಿಕೆಶಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಏನು ಎನ್ನುವುದನ್ನು ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ನಂತರ ಪಕ್ಷದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಅದನ್ನು ಚಾಕಚಕ್ಯತೆಯಿಂದ ನಿಭಾಯಿಸಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡುವ ಮೂಲಕ ಟ್ರಬಲ್ ಶೂಟರ್ ಎಂದೇ ಹೆಸರಾದರು.
ಅಂದು ತಪ್ಪಿದ್ದು ಇಂದು ಲಭಿಸಿತು: ಬಹಳ ಹಿಂದಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣಿಟ್ಟಿದ್ದರು. ಆದರೆ ಪ್ರತಿಬಾರಿಯೂ ಕೈತಪ್ಪುತ್ತಲೇ ಇತ್ತು. 2017ರಲ್ಲಿ ಇನ್ನೇನು ದಕ್ಕೇ ಬಿಟ್ಟಿತು ಎನ್ನುವಾಗ ಐಟಿ ದಾಳಿ ನಡೆದು ಸಂಕಷ್ಟಕ್ಕೆ ಸಿಲುಕುವಂತೆ ಆಯಿತು. ಈ ವೇಳೆ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಮಗನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ನೇರ ಆರೋಪ ಮಾಡುವ ಮೂಲಕ ಕಾಂಗ್ರೆಸ್‌ನಲ್ಲಿ ತಮ್ಮ ಮಗನಿಗೆ ಯಾರು ಶತ್ರು ಎನ್ನುವುದನ್ನು ಬಹಿರಂಗಗೊಳಿಸಿದ್ದರು. ಆದರೆ, ಇದೀಗ ಇಡಿ ಹಿಡಿತಕ್ಕೆ ಸಿಲುಕಿ ಜೈಲುವಾಸ ಅನುಭವಿಸಿ ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಂಕಷ್ಟದಲ್ಲಿ ನೆರವಾಗಿದ್ದ ಶಿಸ್ತಿನ ಸಿಪಾಯಿಯ ಋಣ ತೀರಿಸುವ ಕೆಲಸ ಮಾಡಿದೆ.