ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಬಂದವರಿಗೆ ಸ್ವಾಗತಮಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ

Saleem_Ahmed_ji
ಸಲೀಂ ಅಹ್ಮದ
Published on

ಮಂಗಳೂರು: ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿಕೊಂಡು ಬಂದವರನ್ನು ಸ್ವಾಗತಿಸುತ್ತೇವೆ. ಆದರೆ ಬಿಜೆಪಿ ಅಥವಾ ಜೆಡಿಎಸ್‌ನ ನಾಯಕರು, ಶಾಸಕರನ್ನು ಪಕ್ಷಕ್ಕೆ ಸೇರಿಸುವ ವಿಚಾರದಲ್ಲಿ ನಮ್ಮ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ನಾವು ಯಾರನ್ನು ಕೂಡ ಬಲವಂತವಾಗಿ ಕರೆಸಿಕೊಳ್ಳುವ ಕೆಲಸಕ್ಕೆ ಹೋಗಿಲ್ಲ ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.


ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ಸರ್ಕಾರ ರಚನೆಯಾಗಿದೆ. 136 ಸೀಟ್‌ಗಳನ್ನು ಗೆದ್ದುಕೊಂಡಿದ್ದೇವೆ. 90 ದಿನಗಳಲ್ಲಿ 3 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ. ಆದರೆ ಬಿಜೆಪಿ ಮಾತ್ರ ಗ್ಯಾರಂಟಿಗಳ ವಿರುದ್ಧ ಅಪಪ್ರಚಾರ ಮಾಡುತ್ತಾ ಎರಡು ಸದನಗಳಲ್ಲಿ ಕಾಲಹರಣ ಮಾಡುತ್ತಿದೆ. ಎರಡು ಸದನದಲ್ಲಿ ತಮ್ಮ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವನ್ನು ಮಾಡಿಲ್ಲ. ಈಗಾಗಲೇ ಬಜೆಟ್, ರಾಜ್ಯಪಾಲರ ಮಾತು ಎಲ್ಲವೂ ಮುಗಿದಿದ್ದು, ಇನ್ನೂ ಕೂಡ ಪ್ರತಿಪಕ್ಷ ನಾಯಕ ಇಲ್ಲದೇ ಗ್ಯಾರಂಟಿಗಳ ಮೇಲೆ ವಿರೋಧ ಮಾಡುವ ಕಾರ‌್ಯದಲ್ಲಿ ತಲ್ಲೀನರಾಗಿ ಬಿಟ್ಟಿದ್ದಾರೆ ಎಂದರು.


30ಕ್ಕೆ ಗೃಹಲಕ್ಷ್ಮಿ ಡಿಸೆಂಬರ್‌ಗೆ ಯುವನಿಧಿ: ಈಗಾಗಲೇ ಮೂರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದ್ದು, ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಡಿಸೆಂಬರ್ ಕೊನೆಗೆ ಯುವನಿಧಿಯನ್ನು ಜಾರಿಗೆ ತರಲಾಗುತ್ತದೆ. ಈಗಾಗಲೇ ಜಿ.ಪಂ, ತಾ.ಪಂ.ಚುನಾವಣೆಗಳಿಗೆ ಪಕ್ಷ ಸಿದ್ಧತೆ ನಡೆಸಿದ್ದು, ಬಿಜೆಪಿಯಂತೆ ಚುನಾವಣೆಯನ್ನು ಮುಂದೂಡುವ ಕಾರ‌್ಯ ಮಾಡುವುದಿಲ್ಲ. ಇದರ ಜತೆಯಲ್ಲಿ ಲೋಕಸಭೆ ಚುನಾವಣೆಗೂ ಕಾರ‌್ಯತಂತ್ರಗಳನ್ನು ರೂಪಿಸಲಾಗುತ್ತಿದ್ದು, ದಕ, ಉಡುಪಿ, ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರದ ಸಾಧನೆ, ಗ್ಯಾರಂಟಿಗಳನ್ನು ನೋಡಿ ಜನರು ಕಾಂಗ್ರೆಸ್ ಕಡೆಗೆ ಮತ ಚಲಾಯಿಸಿ ಇಲ್ಲಿ ಗೆಲ್ಲಿಸುವ ವಿಶ್ವಾಸ ನಮಗಿದೆ. ರಾಜ್ಯದಲ್ಲಿ ಈಗಾಗಲೇ ಲೋಕಸಭೆಯ ಅಭ್ಯರ್ಥಿಗಳ ಹುಡುಕಾಟಕ್ಕೆ ಪ್ರತಿ ಕ್ಷೇತ್ರಕ್ಕೆ ಒಬ್ಬ ಮಂತ್ರಿ, ಪಕ್ಷದ ಹಿರಿಯ ನಾಯಕ ಸೇರಿಕೊಂಡು ರಾಜ್ಯದ 28 ಕ್ಷೇತ್ರಗಳಲ್ಲಿರುವ ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಿರಿಯ ಮುಖಂಡರ ಜತೆಯಲ್ಲಿ ಮಾತುಕತೆ ನಡೆಸಿಕೊಂಡು ಅಭ್ಯರ್ಥಿಯ ಆಯ್ಕೆ ಮಾಡುವ ಕೆಲಸವನ್ನು ಮುಂದಿನ ಆರು ತಿಂಗಳಲ್ಲಿ ಮಾಡಲಾಗುತ್ತದೆ. ರಾಜ್ಯದಲ್ಲಿ 20 ಸ್ಥಾನ ಗೆದ್ದು ಬರುವ ವಿಶ್ವಾಸ ನಮ್ಮಲ್ಲಿದೆ ಎಂದರು.


ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೋ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net