ಸಂಘಟನೆಗೆ ಮಹತ್ವ ಕೊಡದಿದ್ದರೆ ಶಿಸ್ತು ಕ್ರಮ, ಕೆಪಿಸಿಸಿ ಉಪಾಧ್ಯಕ್ಷ ವೈ. ಸಯೀದ್ ಅಹ್ಮದ್ ಎಚ್ಚರಿಕೆ

IMG_20240920_175517_379-1.jpg
Published on

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಕೆಲಸ ಮಾಡಲು ಬಹಳಷ್ಟು ಜನ ತಯಾರಿದ್ದಾರೆ, ಪದಾಧಿಕಾರಿಗಳಾಗಿದ್ದುಕೊಂಡು ಸಂಘಟನೆಯಲ್ಲಿ ತೊಡಗಿಕೊಳ್ಳದಿದ್ದರೆ ಅಂಥವರನ್ನು ಕೈಬಿಡಬೇಕೆಂಬ ತೀರ್ಮಾನಕ್ಕೆ ಪಕ್ಷದ ಅಧ್ಯಕ್ಷರು ಬಂದಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವೈ. ಸಯೀದ್ ಅಹ್ಮದ್ ತಿಳಿಸಿದರು.

ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಗೆದ್ದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ನಿರೀತ ಗೆಲುವು ಸಾಧಿಸದಿರಲು ಕಾರಣಗಳೇನು? ಎಂಬುದನ್ನು ಪದಾಧಿಕಾರಿಗಳು ಚಿಂತನೆ ಮಾಡುತ್ತಿಲ್ಲ. ಸಂಘಟನೆ ಕಾರ್ಯದಲ್ಲಿ ನಿಷ್ಠಾವಂತರಿಗೆ ಪ್ರಾಧಾನ್ಯತೆ ನೀಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡದ ದೀಪಕ್ ಚಿಂಚೋರೆ ಅವರು ಸೋತ ಅಭ್ಯರ್ಥಿ. ಅವರ ಮಾತಿನಂತೆ ಕೆಪಿಸಿಸಿ ನೇಮಕಾತಿಯಲ್ಲಿ ಅವಕಾಶಗಳನ್ನು ನೀಡಬೇಕಾಗಿತ್ತು. ಇದೇ ರೀತಿ ಸೋತ ಅಭ್ಯರ್ಥಿಗಳಿಗೆ ಗೌರವ ನೀಡುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪಕ್ಷ ಸಂಘಟನೆ ವಿಚಾರಗಳನ್ನು ಇಟ್ಟುಕೊಂಡು ಕರೆದ ಸಭೆಗೆ ಬಹಳಷ್ಟು ಜನ ಬಂದಿಲ್ಲ. ಇದು ಸರಿಯಾದ ನಡೆಯಲ್ಲ. ಕಾರ್ಯಕರ್ತರು ಸಮಯ ಪಾಲನೆ ಮಾಡಬೇಕು. ಸಭೆಗೆ ಹಾಜರಾಗಬೇಕು ಎಂದು ಸಯೀದ್ ಪಾಠ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸುಮ್ಮನೇ ಕೇಸ್ ಹಾಕಲಾಗಿದೆ. ಕಾಂಗ್ರೆಸ್ ನಾಶ ಮಾಡಬೇಕು ಎಂಬ ಏಕೈಕ ಹುನ್ನಾರದಿಂದ ಹೀಗೆಲ್ಲ ಮಾಡಲಾಗುತ್ತಿದೆ. ಆದರೆ, ಜನರು ಕಾಂಗ್ರೆಸ್ ಜತೆ ಇದ್ದಾರೆ. ಹಾಗೆ ನೋಡಿದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೂ ಕೇಸ್ ಇವೆ. ಅದನ್ನೂ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪಕ್ಷದ ಪದಾಧಿಕಾರಿಗಳಾದವರು ಸಭೆಗೆ ಬರದೇ ಇರುವುದು ಗಂಭೀರ ವಿಷಯ. ಇದರಿಂದ ಸಂಟನೆಗೆ ತೊಂದರೆಯಾಗುತ್ತದೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಬೇಕಾಗಿದೆ. ದೀಪಕ್ ಚಿಂಚೋರೆ ಅವರಂತಹ ಹಿರಿಯರ ಮಾರ್ಗದರ್ಶನ ಪಕ್ಷಕ್ಕೆ ಬೇಕು. ಈ ಬಗ್ಗೆ ಹಿರಿಯ ನಾಯಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಪಕ್ಷದ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಬೂತ್ ಮಟ್ಟದಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ. ಇದಕ್ಕಾಗಿ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ ಮೆಹರವಾಡೆ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಅಲ್ತಾಫ್ ಕಿತ್ತೂರ, ಅರವಿಂದ ಏಗನಗೌಡರ, ದೀಪಾ ಗೌರಿ, ವಸಂತ ಲದವಾ, ಡಾ. ಆನಂದಕುಮಾರ, ಸುವರ್ಣ ಕಲ್ಲಕುಂಟ್ಲ, ಪ್ರೇಮನಾಥ ಚಿಕ್ಕತುಂಬಳ, ರಾಜಶೇಖರ ಕಮತಿ ಇತರರು ಇದ್ದರು.
ನವೀದ್ ಮುಲ್ಲಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net