

ಮಂಡ್ಯ: ಸದನಕ್ಕೆ ಹಾಜರಾಗಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಮೂಲಕ ಪರಿಹಾರ ಕೊಡಿಸಲೆಂದು ಜನರು ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಅಧಿವೇಶನ ಬಿಟ್ಟು ಪಂಚರತ್ನ ಯಾತ್ರೆ ಮಾಡುವ ಅವಶ್ಯಕತೆ ಇತ್ತೇ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಅಧಿವೇಶನದ ಮಹತ್ವ ಅವರಿಗೆ ತಿಳಿದಿಲ್ಲವೇ? ಜನರು ತಮ್ಮ ಹಕ್ಕನ್ನು ಚಲಾಯಿಸಿ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40 ದಿನದಿಂದ ರೈತರು ಹಗಲುರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಯ ಶಾಸಕರ ಜತೆ ಎಚ್‌ಡಿಕೆ ರೈತರ ಬಗ್ಗೆ ಸದನದಲ್ಲಿ ದನಿ ಎತ್ತಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂಚರತ್ನ ಯಾತ್ರೆ ಅಧಿವೇಶನದ ಬಳಿಕ ಮಾಡಬಹುದಿತ್ತು. ನಮ್ಮ ಪಕ್ಷದಲ್ಲಿಯೂ ಹೋರಾಟ, ಜನರ ಸಮಸ್ಯೆಗಳನ್ನು ಕೇಳಲು ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೂ ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರಾಗಿದ್ದಾರೆ. ಜನರ ಪರವಾಗಿ ಸದನದಲ್ಲಿ ಪ್ರಶ್ನೆ ಕೇಳಲು ಸಂವಿಧಾನದತ್ತವಾಗಿ ಶಾಸಕರಿಗೆ ಹಕ್ಕು ನೀಡಲಾಗಿದೆ. ಅದನ್ನು ಬಳಸಿಕೊಂಡು ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಚುನಾವಣೆಗಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟುಕೊಂಡು ರೈತರು ಧರಣಿ ನಡೆಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲೆಯ ಏಳು ಶಾಸಕರು ಜವಾಬ್ದಾರಿ ಮೆರೆಯಬೇಕಿತ್ತು. ಮಾತ್ರವಲ್ಲದೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಬೇಕಿತ್ತು. ಸದನಕ್ಕೆ ಹೋಗದವರು ಇನ್ನೆಲ್ಲಿ ಪ್ರಶ್ನೆ ಮಾಡುತ್ತಾರೆ? ಈ ಬಾರಿ ಮೈಶುಗರ್ ಕಾರ್ಖಾನೆ ಪ್ರಾರಂಭವಾಗುವ ಮುನ್ನ ರೈತರು ಧರಣಿ ನಡೆಸುತ್ತಿದ್ದರು. ಆ ವೇಳೆ ಸಿದ್ದರಾಮಯ್ಯ ಅವರು ಸದನದಲ್ಲಿ ಪ್ರಸ್ತಾಪಿಸಿದ ಕಾರಣಕ್ಕೆ ಸರ್ಕಾರ ತುರ್ತು ಕ್ರಮ ತೆಗೆದುಕೊಂಡಿತ್ತು ಎಂದು ಅಧಿವೇಶನದ ಮಹತ್ವ ತಿಳಿಸಿದರು.
ಜಿಲ್ಲೆಯ ಜನರು ಬದಲಾವಣೆ ಬಯಸಿದ್ದು, ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಜನಸಂಕಲ್ಪ ಯಾತ್ರೆ ವೇಳೆ ಸಿಎಂ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನರೇ ಬದಲಾವಣೆ ಬಯಸಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಸಜ್ಜಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಇನ್ನು ಜೆಡಿಎಸ್‌ನವರು ಹೊರಗೆ ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಅದೇ ಸದನದಲ್ಲಿ ಬಿಜೆಪಿ ಮಂಡಿಸುವ ಜನವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡುತ್ತಾರೆ ಎಂದು ಟೀಕಿಸಿದರು.
15ರೊಳಗೆ ಪಟ್ಟಿ: ಜೆಡಿಎಸ್ ಕುಟುಂಬ ಆಧಾರಿತ ಪಕ್ಷ. ಒಂದೇ ಗಂಟೆಯಲ್ಲಿ ಯಾರು ಅಭ್ಯರ್ಥಿ ಎಂದಾದರೂ ಘೋಷಣೆ ಮಾಡುತ್ತಾರೆ. ಆದರೆ ಕಾಂಗ್ರೆಸ್‌ಗೆ ಹೈಕಮಾಂಡ್ ಇದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿಯಮವಿದೆ. 2023 ಜ.15ರೊಳಗೆ ಸುಮಾರು 150 ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ನಾನು ನಾಗಮಂಗಲ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡುವುದು ಖಚಿತ. ಮಂಡ್ಯ ಮತ್ತು ಕೆ.ಆರ್.ಪೇಟೆ ಕ್ಷೇತ್ರದಿಂದ ಹೆಚ್ಚು ಜನ ಆಕಾಂಕ್ಷಿತರಿದ್ದಾರೆ. ಎಲ್ಲರೊಂದಿಗೆ ಮಾತನಾಡಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಇನ್ನು ಈ ಬಾರಿ ಮೇಲುಕೋಟೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯೇ ಸ್ಪರ್ಧೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ ಬಂಡಿಸಿದ್ದೇಗೌಡ, ಕೆಪಿಸಿಸಿ ಸದಸ್ಯ ಗುರುಚರಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ರವಿಕುಮಾರ ಗಣಿಗ, ಸಿ.ತ್ಯಾಗರಾಜು, ರುದ್ರಪ್ಪ, ವಿಜಯಕುಮಾರ್ ಇತರರಿದ್ದರು.