ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು: ಕೇಸ್ ಕುರಿತು ವಿವರಣೆ ನೀಡಿದ ಕೆಪಿಸಿಸಿ ವಕ್ತಾರ ಸತ್ಯಾನಂದ

KPCC spokesperson Satyananda press conference mandya
Published on

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಗ್ಗೆ ಆಧಾರರಹಿತವಾಗಿ ಆರೋಪ ಮಾಡುವುದರ ಜತೆಗೆ ಏಕವಚನದಲ್ಲಿ ನಿಂದಿಸಿದ್ದ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದೆ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ತಿಳಿಸಿದರು.
2023 ಆಗಸ್ಟ್‌ನಲ್ಲಿ ನಾಗಮಂಗಲದಲ್ಲಿ ಆಯೋಜಿಸಿದ್ದ ತಮ್ಮ ಬೆಂಬಲಿಗರ ಸಭೆಯಲ್ಲಿ ಚಲುವರಾಯಸ್ವಾಮಿ ಕುರಿತು ಹಲವು ಆರೋಪ ಮಾಡಿದ್ದರು. 300 ರಿಂದ 400 ಕೋಟಿ ರೂ ಲೂಟಿ ಮಾಡಿದ್ದಾರೆಂದಿದ್ದರು. ಈ ಸಂಬಂಧ ಚಲುವರಾಯಸ್ವಾಮಿ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸೂಕ್ತ ಪರಿಹಾರ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೂರಿನ ಗಂಭೀರತೆ ಪರಿಗಣಿಸಿ ಪ್ರಕರಣದಲ್ಲಿ ಮಾನಹಾನಿಕಾರಕ ಅಂಶಗಳು ಕಂಡುಬಂದಿರುವುದರಿಂದ ಪ್ರಕರಣ ದಾಖಲಿಸಲು ಆದೇಶಿಸಿದೆ. ಮಾತ್ರವಲ್ಲದೆ ಈ ಸಂಬಂಧ ನ್ಯಾಯಾಲಯ ಸಮನ್ಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು 2024 ಮೇ.21ಕ್ಕೆ ಕಾಯ್ದಿರಿಸಿದೆ. ಇನ್ನು ಮುಂದೆ ಸಾರ್ವಜನಿಕವಾಗಿ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಾ ಸಚಿವರೂ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಗರಸಭಾ ಸದಸ್ಯ ಟಿ.ಕೆ.ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ವೈ.ಎಂ.ನಿಂಗೇಗೌಡ, ನಿಂಗರಾಜು, ವಿಜಯ್‌ಕುಮಾರ್, ಹಾಲಹಳ್ಳಿ ಸಂಪತ್, ಮಹೇಶ್, ಹೊನ್ನೇಶ್ ಇದ್ದರು.

Sureshgowda mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net