

ಧಾರವಾಡ: ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ಖಂಡನೀಯ. ಅವರು ಬಾಯಿ ಚಪಲಕ್ಕೆ ಮಾತನಾಡುವುದನ್ನು ಬಿಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಷಯವಾಗಿ ಮಾತನಾಡುತ್ತಿದ್ದ ವೇಳೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವೈಯಕ್ತಿಕ ಅವಹೇಳನ ಮಾಡಿದ್ದಾರೆ. ಇದೇವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕುರಿತು ಮಾತನಾಡಿದ್ದಾರೆ. ಅವರು ಆರ್‌ಎಸ್‌ಎಸ್‌ನ ಮುಖವಾಣಿಯಂತೆ ಮಾತನಾಡಿದ್ದಾರೆ. ಇದು ಮನುಸ್ಮತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸುವ ಹುನ್ನಾರವಾಗಿದೆ ಎಂದರು.
ಸಂವಿಧಾನದಲ್ಲಿನ ಸಮಾನತೆಯ ಅಂಶಗಳಿಗೆ ವ್ಯತಿರಿಕ್ತವಾಗಿರುವ ಬಿಜೆಪಿ ಮತ್ತು ಸಂಘ ಪರಿವಾರದ ಧೋರಣೆಗಳು ಇಂದಿಗೂ ಬದಲಾಗುತ್ತಿಲ್ಲ. ಜನರ ಹಿತ ಮತ್ತು ಆಶಯಗಳಿಗೆ ವಿರುದ್ಧ ನಡುವಳಿಕೆ ಬದಲಾಗದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಮಣಿಪುರ ಬೆಳವಣಿಗೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿಲುವು ಇಡೀ ದೇಶಕ್ಕೆ ಈಗ ಗೊತ್ತಾಗಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿ ಕುರಿತು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಇತ್ತೀಚೆಗೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಆದರೆ, ಕವಿವಿ ಹಣಕಾಸು ಸ್ಥಿತಿ ಹಲವಾರು ವರ್ಷಗಳಿಂದ ಸರಿಯಿಲ್ಲ. ಆದರೂ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾತನಾಡದ ಸಂಕನೂರ ಅವರೀಗ ಕವಿವಿ ಮೇಲೆ ತೋರಿಸುತ್ತಿರುವ ಕಾಳಜಿ ಆಶ್ಚರ್ಯಕರ. ಯುಜಿಸಿ ಅನುದಾನ, ರಾಜ್ಯ ಸರ್ಕಾರದ ನೆರವು ಮತ್ತು ಆಂತರಿಕ ಸಂಪನ್ಮೂಲ ಸುಧಾರಿಸುವ ಬಗ್ಗೆ ಸೂಕ್ತ ಸಲಹೆ ಕೊಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ನೀರಲಕೇರಿ ಹೇಳಿದರು.