ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ : ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಒತ್ತಾಯ

11Tmk_Asha_Halappa
Published on

ತುಮಕೂರು: ಯೋಧರಂತೆ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನದಂತೆ 12 ಸಾವಿರ ರೂಪಾಯಿ ಮಾಸಿಕ ವೇತನ ನೀಡಬೇಕು. ಜತೆಗೆ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಬೇಕು ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಶನಿವಾರ ವಿವಿಧ ಸಂಘ-ಸಂಸ್ಥೆಗಳ ಜತೆ ಸಭೆ ನಡೆಸಿ, ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಕಷ್ಟಕ್ಕೆ ಸ್ಪಂದಿಸುವುದು ರಾಜ್ಯ, ಕೇಂದ್ರ ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರವೇ ಮಾಡಿರುವ ಕಾಯ್ದೆಯಂತೆ ಕನಿಷ್ಠ ವೇತನ ನೀಡಬೇಕು. ಉದ್ಯೋಗ ಭದ್ರತೆ ಕಲ್ಪಿಸಬೇಕು, ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ 2 ಸಾವಿರ ಗೌರವಧನ ನೀಡುತ್ತಿದ್ದು ಆಶಾ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿದರೆ ಈ ಹಣ ಸಿಗಲಿದೆ. ಇನ್ನೂ ಕೆಲವರಿಗೆ 700, 800, 1000 ಹೀಗೆ ಗೌರವಧನ ಸಿಗುತ್ತಿದೆ. ರಾಜ್ಯ ಸರ್ಕಾರದ 2 ಸಾವಿರ ಸೇರಿ ತಿಂಗಳಿಗೆ ಕೇವಲ 4 ಸಾವಿರ ರೂಪಾಯಿ ಗೌರವಧನ ಪಡೆದು ಪ್ರತಿನಿತ್ಯ ದುಡಿಯುತ್ತಿದ್ದಾರೆ. ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಭರವಸೆ ನೀಡಿರುವ ರಾಜ್ಯ ಸರ್ಕಾರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರ ಸೇವಾ ಭದ್ರತೆ ಕಾಯಂಗೊಳಿಸಬೇಕು ಎಂದು ಹಾಲಪ್ಪ ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್, ಮುಖಂಡ ವಾಲೆಚಂದ್ರಯ್ಯ, ಸಿಐಟಿಯು ಸುಬ್ರಹ್ಮಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net