ಸಂಸದ ಪ್ರತಾಪ್‌ಸಿಂಹ ಮಾತಿನಂತೆ ನಡೆದುಕೊಳ್ಳಲಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

M-Lakshmana
Published on


ಮೈಸೂರು:
ಗುಂಬಜ್ ಮಾದರಿಯ ತಂಗುದಾಣ ಸಂಬಂಧ ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ವಾರ್ ನಡೆಯುತ್ತಿದ್ದು, ಮೈಸೂರಿನ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.
ಪ್ರಯಾಣಿಕರ ತಂಗುದಾಣಕ್ಕೆ ಅಡ್ಡಿಪಡಿಸಿ ದೊಡ್ಡ ವಿವಾದದಂತೆ ಮಾಡಿರುವ ಸಂಸದರು ಮನೆಯಿಂದ ದುಡ್ಡು ತಂದು ನಿರ್ಮಿಸಿದ್ದೀರಾ? ಗುಂಬಜ್ ಮಾದರಿಯಲ್ಲಿ ಇರುವುದನ್ನು ಒಡೆದು ಹಾಕುತ್ತೇನೆಂದು ಹೇಳಿದ್ದಾರೆ. ಅವರು ಕೊಟ್ಟ ಗಡುವು ಮುಗಿದಿದೆ. ಅವರಿಗೆ ಧಮ್, ತಾಕತ್ ಇದ್ದಲ್ಲಿ ನಾಳೆಯೇ ತಂಗುದಾಣ ಒಡೆದುಹಾಕಲಿ ನೋಡೋಣ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.


ಪ್ರತಾಪ್ ಸಿಂಹ ಸಮಾಜದಲ್ಲಿ ವಿಷ ಬೀಜ ಬಿತ್ತುತಿದ್ದಾರೆ. ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡುವುದನ್ನು ನಿಲ್ಲಿಸದಿದ್ದರೆ ಸಂಸದರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಪೊಲೀಸ್ ಠಾಣೆಗೂ ದೂರು ನೀಡುವೆ ಎಂದರು.
ಪ್ರತಾಪ್ ಸಿಂಹ ಸುಳ್ಳು ಹೇಳುವುದರಲ್ಲಿ ಮೊದಲಿಗ. ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಉಂಡುವಾಡಿ ಕುಡಿಯುವ ನೀರಿನ ಯೋಜನೆಗಳು ಬರೀ ಮಾತಲ್ಲೇ ಇವೆ. ಕುಶಾಲನಗರಕ್ಕೆ ರೈಲು ಓಡಿಸುತ್ತೇನೆಂದು ಸರ್ವೆಗೆ 5 ಕೋಟಿ ರೂ. ಅನುದಾನ ಬಿಟ್ಟರೆ ಬೇರೇನೂ ಆಗಿಲ್ಲ. ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ನಿಂತಿದೆ. ದಸರಾ ಒಳಗೆ ದಶಪಥ ರಸ್ತೆಯಲ್ಲಿ ಓಡಾಡಬಹುದೆಂದು ಹೇಳಿದ್ದರೂ ಈತನಕ ಮುಗಿದಿಲ್ಲ ಎಂದು ಆರೋಪಿಸಿದರು.

‘ನಮ್ಮನ್ನು ರಾಜಕೀಯದಿಂದ ದೂರವಿಡಲು ಷಡ್ಯಂತ್ರ ನಡೆಯುತ್ತಿದೆ’ ಎನ್ನುವ ರಾಮದಾಸ್ ಮಾತು ನಿಜ. ನನ್ನ ಮಾಹಿತಿಯ ಪ್ರಕಾರ ಮುಂದೆ ಕೆ.ಜಿ.ಬೋಪಯ್ಯ, ಎಸ್.ಎ.ರಾಮದಾಸ್, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ 43 ಹಾಲಿ ಶಾಸಕರಿಗೆ ಆ ಪಕ್ಷ ಟಿಕೆಟ್ ಕೊಡುವುದಿಲ್ಲ ಎಂದರು.

ಜಿಲ್ಲಾಧಿಕಾರಿಗಳಿಗೆ ದೂರು: ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅಕ್ರಮ ನಡೆದಿರುವ ಕುರಿತಂತೆ ಮೈಸೂರು ಜಿಲ್ಲೆಯಲ್ಲೂ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಅಪರೇಷನ್ ಕಮಲದ ಮೂಲಕ 10 ಸಾವಿರ ಕೋಟಿ ರೂ. ಖರ್ಚು ಮಾಡಿ 9 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಈಗ ಬಿಬಿಎಂಪಿ ಚುನಾವಣೆಯಲ್ಲಿ ಮತದಾರರನ್ನೇ ಖರೀದಿಸಲು ಡಾಟಾ ಸಂಗ್ರಹಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರಲ್ಲಿ ಹನ್ನೊಂದು ಸಾವಿರ ರೂ. ಸಂಗ್ರಹಿಸುತ್ತಿದೆ. 6.50 ಲಕ್ಷ ನೌಕರರಿಂದ ಒಟ್ಟು 6,500 ಕೋಟಿ ರೂ. ಮೊತ್ತ ಸಂಗ್ರಹ ಆಗಲಿದೆ. ಸರ್ಕಾರದ ಬೊಕ್ಕಸ ಬರಿದಾಗಿಲ್ಲ. ಈ ಯೋಜನೆಯಲ್ಲೂ ಲೂಟಿ ಮಾಡುವ ಕೆಲಸ ನಡೆಯುತ್ತದೆಯೇ ಹೊರತು ಬೇರೇನೂ ಲಾಭವಿಲ್ಲ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ.ರಾಮು, ಗಿರೀಶ್ ನಾಯಕ್ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net