

ಮೈಸೂರು: ತಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಅವರ ಪುತ್ರ ಸುನಿಲ್ ಬೋಸ್‌ಗೆ ತಳುಕು ಹಾಕಲು ಪ್ರಯತ್ನಿಸುತ್ತಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಬಹಿರಂಗ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಹಿರಂಗ ಆಹ್ವಾನ ನೀಡಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಈ ಹಿಂದೆ ಸುನಿಲ್ ಬೋಸ್ ಜತೆಗೆ ಫೋಟೋ ತೆಗೆಸಿಕೊಂಡಿದ್ದರು. ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಈ ಹತ್ಯೆ ಪ್ರಕರಣಕ್ಕೂ ಸುನಿಲ್ ಬೋಸ್ ಅವರಿಗೂ ಏನು ಸಂಬಂಧ? ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ್ದ ಸಂದರ್ಭ ಮೋದಿ ಅವರೊಂದಿಗೆ ರೌಡಿಶೀಟರ್ ಫೈಟರ್ ರವಿ ಫೋಟೋ ತೆಗೆಸಿಕೊಂಡಿದ್ದ. ಹಾಗಾದರೆ ಫೈಟರ್ ರವಿ ಮಾಡಿರುವ ತಪ್ಪುಗಳಿಗೆ ಮೋದಿಯನ್ನು ಹೊಣೆ ಮಾಡುತ್ತೀರಾ? ಮಾನಮರ್ಯಾದೆ ಇದ್ದರೆ ಚಕ್ರವರ್ತಿ ಸೂಲಿಬೆಲೆ ಚರ್ಚೆಗೆ ಬರಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕೋಸ್ಕರ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೆಸ್ ವರ್ಚಸ್ಸು ದಿನೇ ದಿನೇ ವೃದ್ಧಿಯಾಗುತ್ತಿದೆ. ಹೀಗಾಗಿ ಕೇಂದ್ರ ನಾಯಕರ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೊಲೆಗಳು ಆಗಿವೆ. ಆದರೆ, ಬಿಜೆಪಿ ಸರ್ಕಾರ ಆಯ್ದ ಕೆಲವರಿಗೆ ಮಾತ್ರ ಪರಿಹಾರ ನೀಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಲೆ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೊಲೆ ಆರೋಪಿಗಳ ಪೈಕಿ ಓರ್ವ ಬಿಜೆಪಿಯ ಜನಪ್ರತಿನಿಧಿಯೊಬ್ಬರ ತಮ್ಮನಾಗಿದ್ದಾನೆ. ಇನ್ನಾದರೂ ಬಿಜೆಪಿ ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದರು.