ಜಿಪಂ ಅಧ್ಯಕ್ಷೆಗೆ ಕೆಪಿಸಿಸಿ ಶ್ರೀರಕ್ಷೆ?

ZP tmk
Published on

ತುಮಕೂರು: ಜಿಪಂ ಅಧ್ಯಕ್ಷೆ ಎಂ.ಲತಾ ವಿರುದ್ಧ ಸರ್ವಪಕ್ಷದ ಸದಸ್ಯರು ಸಹಿ ಮಾಡಿ ಕೋರಿರುವ ಅವಿಶ್ವಾಸ ನಿರ್ಣಯಕ್ಕೆ ಅ.15ರಂದು ವಿಶೇಷ ಸಭೆ ನಡೆಯಲಿದೆ. ಇದರ ಮಧ್ಯೆ ಕಾಂಗ್ರೆಸ್ ಸದಸ್ಯರಿಗೆ ನಿರ್ಣಯ ಬೆಂಬಲಿಸದಂತೆ ವರಿಷ್ಠರು ಸೂಚಿಸಿರುವುದು ಕುತೂಹಲ ಮೂಡಿಸಿದ್ದು, ಅಧ್ಯಕ್ಷೆ ಪತಿ ಕಲ್ಕರೆ ರವಿಕುಮಾರ್ ತಂತ್ರ ಲಿಸುವ ಸಾಧ್ಯತೆ ನಿಚ್ಚಳವಾದಂತಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಜಿಪಂ ಅಧ್ಯಕ್ಷೆ ಲತಾ ಪತಿ ಕಲ್ಕರೆ ರವಿಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಳಿ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಪತ್ರ ಬರೆದು ನಿರ್ಣಯ ಬೆಂಬಲಿಸದಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಪ್ರಸ್ತುತ 57 ಸಂಖ್ಯಾಬಲದಲ್ಲಿ ಅವಿಶ್ವಾಸ ನಿರ್ಣಯ ಗೆಲ್ಲಲು 39 ಸದಸ್ಯರ ಅಗತ್ಯವಿದ್ದು ಕಾಂಗ್ರೆಸ್ ಸದಸ್ಯರು ಬೆಂಬಲವಿಲ್ಲದೆ ಅವಿಶ್ವಾಸ ನಿರ್ಣಯ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಲತಾ ಪತಿ ಕಾಂಗ್ರೆಸ್ ಜತೆ ಗುರುತಿಸಿಕೊಂಡು ರಾಜಕೀಯ ಜಾಣ್ಮೆ ತೋರಿಸಿದ್ದಾರೆ.

ಜಿಪಂನಲ್ಲಿ ಕಾಂಗ್ರೆಸ್ 23, ಉಪಾಧ್ಯಕ್ಷೆ ಶಾರದ ಸೇರಿ ಬಿಜೆಪಿಯ 19 ಹಾಗೂ ಜೆಡಿಎಸ್‌ನ 14 ಹಾಗೂ ಒಬ್ಬ ಸ್ವತಂತ್ರ ಸದಸ್ಯರಿದ್ದು ಅವಿಶ್ವಾಸ ಗೆಲ್ಲಲು 39 ಸದಸ್ಯರು ಸಭೆಗೆ ಹಾಜರಾಗಿ ಕೈಎತ್ತಿ ದೃಢಪಡಿಸಬೇಕು.

ಕಾಂಗ್ರೆಸ್ ಸದಸ್ಯರಿಗೆ ಮುಜುಗರ : ಅಧ್ಯಕ್ಷೆ ಎಂ.ಲತಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಸತತ ಐದು ಸಾಮಾನ್ಯ ಸಭೆ ಮುಂದೂಡಿಕೆಯ ಕಾರಣ ನೀಡಿ ಆರ್‌ಡಿಪಿಆರ್ ಕಾರ್ಯದರ್ಶಿಗೆ ಸಲ್ಲಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಕಾಂಗ್ರೆಸ್‌ನ 19 ಸದಸ್ಯರು ಸಹಿ ಮಾಡಿದ್ದಾರೆ. ಶಿರಾ ಉಪಸಮರದ ನೆಪದಲ್ಲಿ ಕಲ್ಕರೆ ರವಿಕುಮಾರ್ ಸಹಕಾರ ಪಡೆಯಲು ಅವಿಶ್ವಾಸ ನಿರ್ಣಯ ಸಭೆಗೆ ಗೈರಾಗುವಂತೆ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಪ್ ನೀಡಿದರೆ ಇಷ್ಟು ದಿನ ಅಧ್ಯಕ್ಷೆ ವಿರುದ್ಧ ಟೀಕೆ ಮಾಡುತ್ತಿದ್ದ ಸದಸ್ಯರಿಗೆ ಮುಜುಗರ ತರಲಿದೆ.

ವಿಪ್ ನೀಡಲು ಅವಕಾಶವಿಲ್ಲ?: ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಬಾರದು ಎಂದು ಕೆಪಿಸಿಸಿ ಸೂಚನೆಗೆ ಜಿಪಂ ಕಾಂಗ್ರೆಸ್ ಸದಸ್ಯರು ಗರಂ ಆಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಅಧ್ಯಕ್ಷೆ ಪರವಾಗಿ ಮತ ನೀಡಲು ವಿಪ್ ಕೊಡಲು ಅವಕಾಶವಿಲ್ಲ ಎಂದು ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಸದಸ್ಯರ ಈ ವಾದಕ್ಕೆ ಪ್ರತಿತಂತ್ರವಾಗಿ ಸಭೆಗೆ ಹಾಜರಾಗದಂತೆ ವಿಪ್ ನೀಡಲು

ಜಿಲ್ಲಾ ಕಾಂಗ್ರೆಸ್ ಸಮಿತಿ ನಿರ್ಧರಿಸುವ ಸಾಧ್ಯತೆಯಿದ್ದು, ಪಕ್ಷದ ನಿರ್ಧಾರವನ್ನು ಕನಿಷ್ಠ 7 ಸದಸ್ಯರು ತಿರಸ್ಕರಿಸಿದರೂ ಲತಾ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ.

13 ಜೆಡಿಎಸ್ ಸದಸ್ಯರು ಸಹಿ: ಲತಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್‌ನ 14 ಸದಸ್ಯರ ಪೈಕಿ 13 ಸದಸ್ಯರು ಸಹಿ ಹಾಕಿದ್ದಾರೆ, ಉಳಿದಂತೆ ಕಾಂಗ್ರೆಸ್ 19 ಹಾಗೂ ಮಿತ್ರಪಕ್ಷ ಬಿಜೆಪಿ ಉಪಾಧ್ಯಕ್ಷೆ ಶಾರದಾ ಸಹಿತ 19 ಜನರು ಸಹಿ ಹಾಕಿದ್ದು 15ರಂದು ನಡೆಯುವ ವಿಶೇಷ ಸಭೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಸದಸ್ಯರಲ್ಲಿ 7 ಜನರು ಸಭೆಗೆ ಹಾಜರಾಗಿ ಅಧ್ಯಕ್ಷೆ ವಿರುದ್ಧ ಕೈ ಎತ್ತಿದರಷ್ಟೇ ಲತಾ ಪದಚ್ಯುತಿ ಸಾಧ್ಯವಿದ್ದು ಕಾಂಗ್ರೆಸ್ ಪಾಳಯದಲ್ಲಿ ಇದೇ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net