

ಮಂಗಳೂರು : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸುವ ಬದಲು ಪೇಜಾವರ ಶ್ರೀಗಳು ಹಿಂದೂ ಸಮಾಜದಲ್ಲಿನ ಸಾಮಾಜಿಕ ತಾರತಮ್ಯಗಳ ಬಗ್ಗೆ ಮಾತನಾಡಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ರಂಗದಲ್ಲಿರುವವರು ರಾಜಕೀಯಕ್ಕೆ ಮೂಗು ತೂರಿಸಿರುವುದು ಸರಿಯಲ್ಲ. ಸ್ವಾಮೀಜಿಯವರ ಬಗ್ಗೆ ನಮಗೆ ಗೌರವವಿದೆ. ಅವರು ತಾರತಮ್ಯ ಮಾಡುವುದು ಸರಿಯಲ್ಲ ಎಂದರು.
ಅಯೋದ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಸಿದ್ದು ಇಂದು ಸೋರುತ್ತಿದೆ. ಮೊದಲ ಮಹಡಿ ಕಾಮಗಾರಿ ಆಗಿಲ್ಲ. ಅದಕ್ಕಿನ್ನೂ ಒಂದು ವರ್ಷ ಬೇಕು ಎಂದು ರಾಮಮಂದಿರ ಸಮಿತಿಯ ಸದಸ್ಯರೂ ಆಗಿರುವ ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ. ಹಾಗಿರುವಾಗ ಚುನಾವಣೆಯ ಸಂದರ್ಭದಲ್ಲಿ ಉದ್ಘಾಟನೆ ಮಾಡುವ ಮೂಲಕ ಜನರಿಗೆ ಆಮಿಷ ಒಡ್ಡಿರುವುದು ತಾರತಮ್ಯ ಅಲ್ಲವೇ ಎಂದು ಪದ್ಮರಾಜ್ ಪ್ರಶ್ನಿಸಿದರು.
ಚುನಾವಣೆ ಬಳಿಕ ಬಿಜೆಪಿಯವರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಯುಪಿಎ ಸರ್ಕಾರ ಇರುವಾಗ 1 ಬ್ಯಾರಲ್ಗೆ ಕಚ್ಚಾ ತೈಲ 140 ರಿಂದ 147 ರೂ. ಆಗಿತ್ತು. ಅಂದು 62 ರೂ.ಗೆ ಪೆಟ್ರೋಲ್ ಸಿಗುತ್ತಿತ್ತು. ಇಂದು 80-85 ರೂ ನಲ್ಲಿ ಕಚ್ಚಾ ತೈಲ ಸಿಗುತ್ತಿದ್ದರೂ ಪೆಟ್ರೋಲ್ ದರ ಇಳಿಕೆಯಾಗಿಲ್ಲ. ನಿಮ್ಮ ಆಡಳಿತದಲ್ಲಿ ಒಂದು ಬಾರಿಯಾದರೂ 60 ರೂ.ಗೆ ಪೆಟ್ರೋಲ್ ನೀಡಲು ಸಾಧ್ಯವಾಗಿದೆಯೇ ಎಂದವರು ಪ್ರಶ್ನಿಸಿದರು.
ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ. ಹೆಗ್ಡೆ ಮಾತನಾಡಿ, ಗುರುವಿನ ಸ್ಥಾನದಲ್ಲಿರುವವರು ಸತ್ಯ ಧರ್ಮದ ದಾರಿ ತಿಳಿದು ಪ್ರವಚನ ಮಾಡಬೇಕು. ಅಂತಹ ಗುರು ಪರಂಪರೆಯನ್ನು ನೀವು ಯಾಕೆ ಬಿಜೆಪಿ ಮಯ ಮಾಡುತ್ತಿದ್ದೀರಿ ಎಂದು ಪೇಜಾವರ ಶ್ರೀಗಳನ್ನು ಪ್ರಶ್ನಿಸಿದರು.
ಸ್ವಾಮೀಜಿಯವರು ಯಾವುದೇ ಪಕ್ಷದ ಪರ ಮಾತನಾಡುವುದನ್ನು ಒಪ್ಪಲಾಗದು. ಜನರಿಗೆ ಸತ್ಯ ಧರ್ಮದ ಮಾರ್ಗದರ್ಶನವನ್ನು ಅವರು ಮಾಡಬೇಕು ಎಂದವರು ಹೇಳಿದರು.
ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪ್ರಮುಖರಾದ ಮನೋರಾಜ್ ಉಪಸ್ಥಿತರಿದ್ದರು.