

ಬಣಕಲ್: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಣಕಲ್ ಹೋಬಳಿ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಸೋಮವಾರ ಬಣಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ವಕ್ತಾರ ಸುಧೀರ್ಕುಮಾರ್ ಮುರೋಳ್ಳಿ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ತೊಘಲಕ್ ನೀತಿಯಂತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯಿಂದ ಕಾಫಿನಾಡಲ್ಲಿ ಜನರು ಸಂತ್ರಸ್ತರಾದರೂ ಸಂಸದೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಬೆಲೆ ಏರಿಕೆ ನಿಯಂತ್ರಿಸಿ ಜನಪರ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಸರ್ಕಾರದ ದುರಾಡಳಿತದ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನಬಳಕೆ ವಸ್ತುಗಳು, ಅಡುಗೆ ಅನಿಲ, ಪಟ್ರೋಲ್, ಡೀಸೆಲ್ ಬೆಲೆ ನಿರಂತರ ಹೆಚ್ಚಿಸುವ ಮೂಲಕ ಜನ ಸಾಮಾನ್ಯರ ಬದುಕು ನಾಶ ಮಾಡಿದೆ ಎಂದು ಆರೋಪಿಸಿದರು.
ನಯನ ಮೋಟಮ್ಮ ಮಾತನಾಡಿ, ಬಿಜೆಪಿ ಜನಪರ ಸರ್ಕಾರವಾಗದೇ ಬೆಲೆ ಏರಿಸಿ ಜನವಿರೋಧಿ ಕೆಲಸ ಮಾಡುತ್ತಿದೆ. ಕೃಷಿಕರು, ಕಾಫಿ ಬೆಳೆಗಾರರು, ರೈತರು, ಕಾರ್ವಿುಕ ವರ್ಗದವರ ಸಂಕಷ್ಟವನ್ನು ಅರಿತುಕೊಳ್ಳದೆ ಬದುಕಿನ ಜತೆ ಆಟವಾಡುತ್ತಿದೆ. ಮುಂದೆ ಬಿಜೆಪಿ ಸರ್ಕಾರಕ್ಕೆ ಎಚ್ಚರವಾಗುವವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ ಎಂದರು.