

ಬೆಂಗಳೂರು: ನಗರದ ಪ್ರೆಸ್ ಕ್ಲಬ್ನಲ್ಲಿ ಇಂದು(ಗುರುವಾರ) ನಡೆದ ಸಂವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವು ವಿಚಾರಗಳನ್ನು ಹೊರಹಾಕಿದರು. ಕೋವಿಡ್ ಸಂದರ್ಭದಲ್ಲಿ ನನಗೆ ಕೆಪಿಸಿಸಿ ಜವಾಬ್ದಾರಿ ವಹಿಸಿದರು. ಅಂದಿನಿಂದ ನಾನು ಒಂದು ದಿನವೂ ಸರಿಯಾಗಿ ನಿದ್ರೆ ಮಾಡಿಲ್ಲ ಎನ್ನುತ್ತಲೇ ಕಾಂಗ್ರೆಸ್‌ಗಿಂತ ದೊಡ್ಡ ವಿರೋಧ ಪಕ್ಷವಾಗಿ ಪ್ರತಿಕೆಗಳೇ ಕೆಲಸ ಮಾಡಿವೆ. ಆಡಳಿತ ಪಕ್ಷದ ಲೋಪವನ್ನು ಸರ್ಕಾರದ ಕಚೇರಿಯಿಂದ ಹೊರ ತೆಗೆಯುವುದು ಅಷ್ಟು ಸುಲಭವಲ್ಲ ಎಂದರು.
ಮುಂದಿನ ಸಿಎಂ ಬಗ್ಗೆ ಕಿತ್ತಾಟ ಮಾಡುತ್ತಿದ್ದೇವೆ ಎಂದು ಪತ್ರಿಕೆಯವರು ಬರೆಯುತ್ತಿದ್ದೀರಿ, ಪ್ರತಿಪಕ್ಷದವರೂ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಅವರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಅವರಿಗೂ ಧನ್ಯವಾದಗಳು ಎಂದ ಡಿಕೆಶಿ, ಡಬಲ್ ಇಂಜಿನ್ ಸರ್ಕಾರ ಎನ್ನುವವರು ಜನರ ಮುಂದೆ ಹೋಗಲು ಹೆದರುತ್ತಿದ್ದಾರೆ. ಜಿಪಂ, ತಾಪಂ, ಪಾಲಿಕೆಗೆ ಚುನಾವಣೆ ಮಾಡಲು ಭಯ ಏನು? ರಾಜ್ಯದ ಮತದಾರರ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದ ಸರ್ಕಾರಕ್ಕೆ ಕೋರ್ಟ್ ಐದು ಲಕ್ಷ ರೂ. ದಂಡ ಹಾಕಿದೆ. ಇದು ಯಾರ ಹೊಣೆ? ಮುಖ್ಯಮಂತ್ರಿಯವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಲಿ ಎಂದು ಆಗ್ರಹಿಸಿದರು.
ಉಪ ಚುನಾವಣೆ ಆಡಳಿತ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುತ್ತವೆ, ಆದರೆ ಜನ ನಮ್ಮ ಶಕ್ತಿ ಹೆಚ್ಚಿಸಿದ್ದಾರೆ. ಸರ್ಕಾರ ಬಂದ ಮೇಲೆ ಜನರಿಗೆ ಹೊಟ್ಟೆ ತಬಿಸುವ ಒಂದು ಯೋಜನೆ ಕೊಡಲಿಲ್ಲ. ಹತ್ತು ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಘೋಷಣೆ ಮಾಡಿದರು, ಈ ವರೆಗೆ ಒಂದು ಉದ್ಯೋಗ ಸೃಷ್ಟಿಯಾಗಿಲ್ಲ. ನಮ್ಮ ಕಾಲದ ಒಂದು ಭ್ರಷ್ಟಾಚಾರವನ್ನು ಆಚೆ ತರಲು ಆಗಲಿಲ್ಲ. ಭ್ರಷ್ಟಾಚಾರದಲ್ಲಿ ಎರಡು ಮಂತ್ರಿ ತಲೆದಂಡ ಕೊಡಬೇಕಾಗಿ ಬಂದಿತು. ಅವರೆಲ್ಲ ಶುದ್ಧ ಹಸ್ತರಾಗಿ ಹೊರಬರುತ್ತಾರೆ ಎಂದು ಸಿಎಂ ಸರ್ಟಿಫಿಕೇಟ್ ಕೊಡುತ್ತಾರೆ. ಬಿ ರಿಪೋರ್ಟ್ ಹಾಕಲು ಸಿಎಂ ಸೂಚನೆ ಕೊಟ್ಟರು. ಕರೆಪ್ಶನ್ ಕ್ಯಾಪಿಟಲ್ ಎಂದು ಖ್ಯಾತಿ ಬಂತು. ಗುತ್ತಿಗೆದಾರರ ಸಂಘದ ಕೆಂಪಣ್ಣ ಪತ್ರ ಬರೆದರು, ಅವರನ್ನು ವಿಚಾರಣೆ ಮಾಡಿದರೇ? ಇವರ ಭ್ರಷ್ಟಾಚಾರ ಮತದಾರರ ಪಟ್ಟಿ ವರೆಗೂ ಬಂತು. ಮತದಾರರ ಪಟ್ಟಿಯಲ್ಲಿ ಡಿಲೀಟ್ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಮತದಾರರ ಹೆಸರು ಡಿಲೀಟ್ ಮಾಡಿದರು, ಈ ಮೂಲಕ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದರು. ಶಾಸಕರು ಮಂತ್ರಿಗಳ ಒತ್ತಡಕ್ಕೆ ಅಮಾಯಕ ಅಧಿಕಾರಿಗಳು ಸಿಲುಕಿದ್ದಾರೆ ಎಂದು ಆರೋಪಿಸಿದ ಡಿಕೆಶಿ, ಕಾಂಗ್ರೆಸ್ ಅನ್ನು ಭ್ರಷ್ಟಾಚಾರದ ಗಂಗೋತ್ರಿ ಅನ್ನುತ್ತಿದ್ದರು. ಏನಾದರೂ ಮಾಡ್ರಿ ಎಂದು ಹೇಳುತ್ತೇವೆ. ಏಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಸುಮ್ಮನೆ ಹಾದಿ ತಪ್ಪಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನು ಮಂಗಳೂರಿನ ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಟೆರರಿಸ್ಟ್ ಎಲ್ಲಿಂದ ಬಂದ? ಡಿಜಿ ಕೂಡಲೇ ಟ್ವೀಟ್ ಮಾಡುತ್ತಾರೆ, ಎನ್‌ಐಎ ತತನಿಖೆಯಂತೆ. ಇದು ದಿಕ್ಕು ತಪ್ಪಿಸುವ ಪ್ರಯತ್ನ. ಕುಕ್ಕರಂತೆ, ಬ್ಲಾಸ್ಟ್ ಅಂತೆ. ಹೂಡಿಕೆದಾರರು ಕರಾವಳಿ, ಮಲೆನಾಡಿಗೆ ಏಕೆ ಹೋಗುತ್ತಿಲ್ಲ? ಶಿವಮೊಗ್ಗದವರು ಬರೀ ಭಾವನೆಯಲ್ಲಿ ರಾಜ್ಯ ಮತ್ತು ದೇಶ ಆಳಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಮ್ಮ ಸರ್ವೆ ಕ್ಲಿಯರ್ ಇದೆ. ನಾವು 136 ಸೀಟು, ಬಿಜೆಪಿಗೆ 60-65 ಬರಲಿದೆ. ನಾವು ಹತ್ತಾರು ವರ್ಷದಿಂದ ಕ್ಷೇತ್ರ ಗೆಲ್ಲದ ಕಡೆಯೂ ಹತ್ತು ಹದಿನೈದು ಮಂದಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ನಲ್ಲಿ ಅವರವರ ನಾಯಕರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲು ತಪ್ಪಿಲ್ಲ. ನಾನು ಸಿದ್ದರಾಮಯ್ಯ ನಡುವೆ ಕಿತ್ತಾಟ ನಡೆದ ಒಂದು ಸಣ್ಣ ಉದಾಹರಣೆ ಹೇಳಿ? ದೆಹಲಿಯಲ್ಲಿ ಯಾರೂ ಕೂರಿಸಿ ಮಾತನಾಡಿಲ್ಲ. ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದರು. ನಾನೂ ಸರ್ವೆ ಮಾಡಿಸಿದ್ದೆ, ಎಐಸಿಸಿಯೂ ಸರ್ವೆ ಮಾಡಿಸಿದೆ. ಪಕ್ಷದ ಘಟಕವೂ ಮಾಡಿದೆ. ಬೇರೆ ರಾಜ್ಯಗಳಲ್ಲಾದ ಎಚ್ಚರಿಕೆಯಿಂದ ಹೋಗಲು ಸೂಚಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಬಿಜೆಪಿಯವರು ರೌಡಿಮೋರ್ಚಾ ಆರಂಭಿಸಿದ್ದಾರೆ. ಆಪರೇಷನ್ ಕಮಲ ಈಗ ಆಪರೇಷನ್ ರೌಡಿ ಮಾಡುತ್ತಿದ್ದಾರೆ. ನಾನು ಕೊತ್ವಾಲ ರಾಮಚಂದ್ರ ಶಿಷ್ಯ ಎಂಬುದಕ್ಕೆ ಬಿಜೆಪಿಯವರು ದಾಖಲೆ ಕೊಡಲಿ. ನಾನು ಅನೇಕ ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಅರಸು, ಬಂಗಾರಪ್ಪ ಅನೇಕರು ಬಂದು ಹೋಗಿದ್ದಾರೆ, ತಪ್ಪೇನಿದೆ? ಎಂದು ಪ್ರಶ್ನಿಸಿದರು.
ವಲಸಿಗರು ವಾಪಸ್ ಬರುವ ಬಗ್ಗೆ ಸಂಕ್ರಾಂತಿ ವೇಳೆಗೆ ಸ್ಪಷ್ಟತೆ ಸಿಗಲಿದೆ ಕಾದು ನೋಡಿ ಎಂದ ಡಿಕೆಶಿ, ಸಮಾವೇಶಗಳ ಬಳಿಕ ಇಪ್ಪತ್ತು ಜಿಲ್ಲೆಗಳಿಗೆ ಪ್ರವಾಸ ಮಾಡುತ್ತೇವೆ. ಬಳಿಕ ಉತ್ತರಕ್ಕೆ ಸಿದ್ದರಾಮಯ್ಯ, ದಕ್ಷಿಣಕ್ಕೆ ನಾನು ಪ್ರವಾಸ ಮಾಡುತ್ತೇವೆ. ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲೆಲ್ಲ ಹೋಗಿ ಸಹಾಯ ಕೇಳುತ್ತೇನೆ, ತಪ್ಪೇನಿದೆ? (ಮುಂದಿನ ಸಿಎಂ ವಿಚಾರ) ಎಂದರು.
ಸಿಎಂ ದಮ್ಮು ದಮ್ಮು ದಮ್ಮು ಅನ್ನುತ್ತಾರಲ್ಲ, ಮೀಸಲು ವಿಚಾರವನ್ನು ಕೇಂದ್ರಕ್ಕೆ ಕೊಂಡೊಯ್ದು ಶಾಸನ ತಂದು ಸೀಲು ಹೊಡೆಸಲಿ ಎಂದು ಸಿಎಂಗೆ ಸವಾಲು ಹಾಕಿದ ಡಿಕೆಶಿ, ದೆಹಲಿ ಎಂಸಿಡಿಯಲ್ಲಿ ಹಿಮಾಚಲದಲ್ಲಿ ಅವರು ಗೆಲ್ಲಲು ಆಗಲಿಲ್ಲ. ಅವರು ಬೇರೆ ಬೇರೆ ಪ್ರಯತ್ನ ಮಾಡುತ್ತಾರೆ, ಹಿಂದೆಯೂ ನಡೆದಿತ್ತು, ಈಗಲೂ ನಡೆಯುತ್ತದೆ ಎಂದರು.