

ಬಳ್ಳಾರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರನ್ನು ಮಾತನಾಡಿಸುವವರಿಲ್ಲ. ಆಸ್ಪತ್ರೆಗೆ ಹೋಗಿಬಂದವರ ಗೋಳಿನ ಕಥೆ ಕೇಳಿ ಹಲವು ಸಿನಿಮಾ ಮಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಒಬ್ಬರಿಗೆ ಸೋಂಕು ಬಂದರೆ 20 ಜನರನ್ನು ಬಲವಂತವಾಗಿ ಕ್ವಾರಂಟೈನ್ ಮಾಡಿ ಬಿಲ್ ಎತ್ತುವ ದಂಧೆ ನಡೆದಿದೆ. 120 ದಿನ ಲಾಕ್ಡೌನ್ ಆದರೂ ಕರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಸಿದ್ಧತೆ ಕೈಗೊಳ್ಳಲಿಲ್ಲ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬೆಂಗಳೂರಿನಲ್ಲಿ ಸೋಂಕಿತ ಮಾಜಿ ಸಚಿವರೊಬ್ಬರಿಗೆ ಖಾಸಗಿ ಆಸ್ಪತ್ರೆಯವರು 17 ಲಕ್ಷ ರೂ. ಬಿಲ್ ಮಾಡಿದ್ದಾರೆ. ಇನ್ನು ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಖಾಸಗಿ ಆಸ್ಪತ್ರೆ ಬಿಲ್ನಲ್ಲೂ ಪಾಲುದಾರಿಕೆ ಪಡೆಯಲಾಗುತ್ತಿದೆ. ಐದು ಸಾವಿರ ರೂ. ಸಹಾಯಧನ ಎಷ್ಟು ಬಡವರಿಗೆ ತಲುಪಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ನೀಡಿರುವ ನೋಟಿಸ್ ನನಗಿನ್ನೂ ತಲುಪಿಲ್ಲ. ನಾನು ನಿತ್ಯ ಪೋಸ್ಟ್ಮ್ಯಾನ್ಗೆ ಫೋನ್ ಮಾಡಿ ಕೇಳುತ್ತಿದ್ದೇನೆ. ನೋಟಿಸ್ ಬಂದ ಬಳಿಕ ಸೂಕ್ತ ಉತ್ತರ ನೀಡುತ್ತೇನೆ. ಕಾಶಿ, ಮಥುರಾದಲ್ಲಿರುವ ಮಸೀದಿಗಳನ್ನು ತೆರವು ಮಾಡಬೇಕು ಎಂದಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಈಶ್ವರಪ್ಪ ಹೇಳಿಕೆ ಕುರಿತು ಸಿಎಂ ಸ್ಪಷ್ಟನೆ ನೀಡಲಿ. ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದರು.