

ಮಂಡ್ಯ: ಬುದ್ಧವಿಹಾರ ಟ್ರಸ್ಟ್‌ಗೆ ನಿವೇಶನ ನೀಡಿರುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಮಾಜಕ್ಕೆ ಸುಳ್ಳು ಸಂದೇಶ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಆರೋಪಿಸಿದರು.
ಹಾಗೆ ನೋಡಿದರೆ ಛಲವಾದಿ ನಾರಾಯಣಸ್ವಾಮಿ ಅವರು 2006ರಲ್ಲಿ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ಎರಡು ಎಕರೆ ಜಮೀನನ್ನು ಪಡೆದಿದ್ದಾರೆ. ಆದರೆ ಇದುವರೆಗೂ ಕೈಗಾರಿಕೆ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗ ನೀಡಿಲ್ಲ. ಯಾರಿಗೂ ಉದ್ಯೋಗ ನೀಡದ ನಾರಾಯಣಸ್ವಾಮಿ ಅವರು, ಬೇರೆಯವರ ಮನೆಯ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಖರ್ಗೆ ಕುಟುಂಬವನ್ನು ಟೀಕಿಸಿರುವ ನೈತಿಕತೆ ಛಲವಾದಿ ನಾರಾಯಣಸ್ವಾಮಿಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬುದ್ಧ ವಿಹಾರ ಟ್ರಸ್ಟಿಗೆ ನ್ಯಾಯ ಸಮ್ಮತವಾಗಿಯೇ ನಿವೇಶನ ವಿತರಣೆ ಮಾಡಲಾಗಿದೆ. ಆದ್ದರಿಂದ ರಾಷ್ಟ್ರೋತ್ಥಾನ ಸಮಿತಿ ಮತ್ತು ಚಾಣಕ್ಯ ಪ್ರತಿಷ್ಠಾನಕ್ಕೆ ಅತಿ ಕಡಿಮೆ ಬೆಲೆಯಲ್ಲಿ ನೂರಾರು ಎಕರೆ ಜಮೀನನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿತ್ತು. ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ಎಸ್‌ಸಿ ವಿಭಾಗದ ಸಂಚಾಲಕ ಸಿದ್ದಲಿಂಗಯ್ಯ, ನಗರಸಭೆ ಸದಸ್ಯರಾದ ಶ್ರೀಧರ್, ಹರೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊಂಬಯ್ಯ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಮುಜಾಹಿದ್ ಆಲಿಖಾನ್, ಅಸಂಘಟಿತ ವಿಭಾಗದ ಜಿಲ್ಲಾಧ್ಯಕ್ಷ ಬಿ.ಟಿ.ಗುರುರಾಜ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ವಿಜಯ್‌ಕುಮಾರ್ ಚಂದಗಾಲು ಇದ್ದರು.