ಶ್ರೀ ನಾರಾಯಣಗುರು ಪ್ರತಿಮೆಗೆ ಹಾರಾರ್ಪಣೆ ಚುನಾವಣಾ ಗಿಮಿಕ್ ಎಂದ ವಿನಯ ಕುಮಾರ್ ಸೊರಕೆ

mng--16 april congress
Published on

ಮಂಗಳೂರು: ನರೇಂದ್ರ ಮೋದಿ ರೋಡ್‌ಶೋ ವೇಳೆ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಹಾರಾರ್ಪಣೆ ಮಾಡಿದ್ದು ಚುನಾವಣಾ ಗಿಮಿಕ್. ನಾರಾಯಣ ಗುರುಗಳು ಮೊದಲು ಆಗಮಿಸಿದ ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡುವ ಬೇಡಿಕೆ ಈಡೇರಿಸಿಲ್ಲ. ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕೊಡಲಿಲ್ಲ, ಅವರ ಪಠ್ಯವನ್ನೇ ಕಿತ್ತೆಸೆದರು. ಈಗ ಚುನಾವಣೆ ಸಂದರ್ಭ ಅವರಿಗೆ ನಾರಾಯಣ ಗುರುಗಳ ನೆನಪಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು.


ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ 42 ಮಂದಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.


ಈ ವೇಳೆ ಮಾತನಾಡಿದ ವಿನಯ ಕುಮಾರ್ ಸೊರಕೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ತನ್ನ ಜಾತ್ಯತೀತತೆಯ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ರಾಜ್ಯಾದ್ಯಂತ ಅನೇಕ ವರ್ಷಗಳ ಕಾಲ ಜೆಡಿಎಸ್‌ಗಾಗಿ ದುಡಿದ ಮುಖಂಡರು, ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರಿಗೆ ಗ್ಯಾರಂಟಿ ಸಿಕ್ಕಿಲ್ವಾ?:
ಈ ಚುನಾವಣೆಯಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳು ಬಹುಮಟ್ಟಿಗೆ ಕೈಹಿಡಿಯಲಿವೆ. ಬಿಜೆಪಿಯವರಿಗೂ ಗ್ಯಾರಂಟಿ ಫಲ ದೊರೆತಿದೆ. ಯಾರಿಗೆ ಸಿಕ್ಕಿಲ್ಲ ಹೇಳಲಿ ನೋಡೋಣ? ಗ್ಯಾರಂಟಿ ಕಾರಣದಿಂದಲೇ ಶೇ.10-15ರಷ್ಟು ಬಿಜೆಪಿ ಓಟುಗಳು ಕಾಂಗ್ರೆಸ್‌ಗೆ ಸಿಗಲಿವೆ. ಜತೆಗೆ ರಾಷ್ಟ್ರ ಮಟ್ಟದಲ್ಲಿ ಘೋಷಣೆ ಮಾಡಿರುವ 5 ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಆದರೆ ಬಿಜೆಪಿ ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಈಗ ಜನ ಮೋದಿ ಗ್ಯಾರಂಟಿ ನಂಬುತ್ತಾರಾ? ಎಂದು ಪ್ರಶ್ನಿಸಿದರು.


ಹರೀಶ್ ಕುಮಾರ್ ಮಾತನಾಡಿ, ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದಾಗ ಕರಾವಳಿ ಹಾಗೂ ರಾಜ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಹೇಳಬೇಕಿತ್ತು. ಆದರೆ ಯಾವುದೇ ಅಭಿವೃದ್ಧಿ ವಿಚಾರಗಳನ್ನು ಹೇಳದೆ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಟೀಕಿಸುತ್ತಿದ್ದರು. ಈಗ ಮೋದಿ ಗ್ಯಾರಂಟಿಯಿಂದ ದೇಶ ದಿವಾಳಿ ಆಗಲ್ವಾ? ಕರ್ನಾಟಕದಿಂದ 100 ಕೋಟಿ ರೂ. ಬೇರೆ ರಾಜ್ಯಗಳಿಗೆ ಹೋಗಿದೆ ಎಂದು ಮೋದಿ ಆರೋಪಿಸಿದ್ದಾರೆ. ಅವರದ್ದೇ ಸರ್ಕಾರ ಇರುವಾಗ ತನಿಖೆ ಮಾಡುವುದು ಬಿಟ್ಟು ಸುಳ್ಳು ಹೇಳಿದರೆ ಜನ ನಂಬುವ ವಿಚಾರವೇ? ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಮುಖಂಡರಾದ ಟಿ.ಎಂ. ಶಹೀದ್, ಶಾಲೆಟ್ ಪಿಂಟೊ, ಟಿ.ಕೆ. ಸುಧೀರ್, ನೀರಜ್‌ಪಾಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net