ಕೆಪಿಸಿಸಿ ಯುವ ಘಟಕದ ಪ್ರ. ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ

MBL 9-1
Published on

ಮುದ್ದೇಬಿಹಾಳ: ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಲು ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ಹಿರಿಯ ಮುತ್ಸದ್ದಿ ಮಾಜಿ ಶಾಸಕ ಸಿ.ಎಸ್. ನಾಡಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ಉತ್ತರ ಕರ್ನಾಟಕ ಭಾಗದ ಐದಾರು ಜಿಲ್ಲೆಗಳ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ಪ್ರಮುಖ ಸಮಿತಿಗಳಲ್ಲಿನ ಪದಾಧಿಕಾರಿಗಳ ಆಯ್ಕೆಗೆ ಮತದಾನ ಮಾಡುತ್ತಾರೆ. ಆದರೆ, ನಮ್ಮ ಭಾಗದವರೇ ಕೆಪಿಸಿಸಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಲರಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸಂಘಟಿಸಲು ಹಾಗೂ ಉತ್ತರ ಕರ್ನಾಟಕದ ಧ್ವನಿಗೆ ಸ್ಪಂದಿಸಲು ಈ ಸ್ಪರ್ಧೆಗೆ ಧುಮುಕಿದ್ದೇನೆ. ಇದು ನನ್ನ ಅಧಿಕೃತ ರಾಜಕೀಯ ಎಂಟ್ರಿ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಮಾಜಿ ಸದಸ್ಯ ಎಚ್.ಬಿ. ಸಾಲಿಮನಿ (ಪಿಂಟು) ಮಾತನಾಡಿ, ಮಾಜಿ ಸಚಿವರು, ಶಾಸಕ ಶಿವಾನಂದ ಪಾಟೀಲರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ಸಂಯುಕ್ತಾ ಪಾಟೀಲ ಅವರು ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಪ್ರಬಲ ನಾಯಕಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಪಕ್ಷದ ಕಾರ್ಯಕರ್ತರು ಅವರಿಗೆ ಬೆಂಬಲಿಸಿ ಕೈ ಬಲಪಡಿಸಬೇಕು ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಗುರು ತಾರನಾಳ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಡಗೌಡ (ಚಿನ್ನು), ಎನ್‌ಎಸ್‌ಯುಐ ಅಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಘಟಕದ ಅಧ್ಯಕ್ಷ ಮಹ್ಮದ್‌ರಫೀಕ್ ಶಿರೋಳ, ಸಚಿನ್‌ಗೌಡ ಪಾಟೀಲ, ಹುಸೇನ್ ಮುಲ್ಲಾ, ಲಕ್ಷ್ಮಣ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net