ಕೆಪಿಸಿಸಿ ಸಾರಥಿ ನೇಮಕ ಇನ್ನೂ ವಿಳಂಬ: ರಾಹುಲ್ ವಿದೇಶದಿಂದ ಬರಬೇಕು 10ರ ನಂತರವೇ ಘೋಷಣೆ

KPCC
Published on

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಮಾರ್ಚ್ 10ರ ತನಕ ನಡೆಯುವ ಸಾಧ್ಯತೆಗಳಿಲ್ಲ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದು, ಅವರು ವಾಪಸ್ ಬರುವ ತನಕ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ನಡೆಯುವುದಿಲ್ಲವೆಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಂತಿಮ ನಿರ್ಧಾರವನ್ನು ರಾಹುಲ್ ಗಾಂಧಿ ಅವರೇ ಕೈಗೊಳ್ಳಬೇಕಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಜವಾಬ್ದಾರಿಯನ್ನು ರಾಹುಲ್ ಹೆಗಲಿಗೆ ಕಟ್ಟಿದ್ದಾರೆ. ಆದ್ದರಿಂದ ಅವರೇ ವಿದೇಶದಿಂದ ಬಂದು ತೀರ್ಮಾನ ಮಾಡಬೇಕಾಗಿದೆ. ರಾಹುಲ್ ಮಾ.10ರ ವೇಳೆಗೆ ವಿದೇಶ ಪ್ರವಾಸದಿಂದ ವಾಪಸ್ ಬರಲಿದ್ದಾರೆ. ಆನಂತರ ಮತ್ತೊಮ್ಮೆ ರಾಜ್ಯ ನಾಯಕರ ಜತೆ ಚರ್ಚೆ ನಡೆಸಿ, ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬಗ್ಗೆ ತೀರ್ವನಕ್ಕೆ ಬರಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ನಡುವೆ ಅಧ್ಯಕ್ಷ ಗಾದಿಗೆ ಪೈಪೋಟಿ ಇದೆ. ರಾಜ್ಯ ಕಾಂಗ್ರೆಸ್ ಮುಖಂಡರು ಇಬ್ಬರ ಪರವಾಗಿಯೂ ಅಭಿಪ್ರಾಯಗಳನ್ನು ನೀಡಿದ್ದಾರೆ. ಆದ್ದರಿಂದಲೇ ಹೈಕಮಾಂಡ್​ಗೆ ನಿರ್ಧಾರ ಮಾಡುವುದು ಕಷ್ಟವಾಗುತ್ತಿದೆ. ಕಾರ್ಯಧ್ಯಕ್ಷರು ಎಷ್ಟು ಜನರಿರಬೇಕು ಎಂಬುದು ಸಹ ಗೊಂದಲಕ್ಕೆ ಒಳಗಾಗಿದೆ. ವಿಭಾಗಕ್ಕೆ ಒಬ್ಬರಂತೆ ನಾಲ್ಕು ಜನ ಬೇಕು ಎಂಬ ಅಭಿಪ್ರಾಯ ಇದ್ದರೆ, ಕೆಲ ಮುಖಂಡರು ಇಬ್ಬರು ಸಾಕು ಎಂದು ವಾದಿಸುತ್ತಿದ್ದಾರೆ.

ಡಿಕೆಶಿ ಮನೆಗೆ ಗುಲಾಂ ನಬಿ ಭೇಟಿ

ಹೈಕಮಾಂಡ್​ನ ಪ್ರಭಾವಿ ಮುಖಂಡರಾದ ಗುಲಾಂನಬಿ ಆಜಾದ್ ಶನಿವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್ ಮನೆಗೆ ತಿಂಡಿಗೆ ಹೋಗಿರುವುದು ಕಾಂಗ್ರೆಸ್ ವಲಯದಲ್ಲಿ ವದಂತಿಗಳು ಹರಡಲು ಕಾರಣವಾಗಿದೆ. ಬೆಂಗಳೂರಿನಲ್ಲಿರುವ ಕಾಶ್ಮೀರಿ ಜನರೊಂದಿಗೆ ಸಭೆ ನಡೆಸುವ ಸಲುವಾಗಿ ಶುಕ್ರವಾರ ರಾತ್ರಿ ಗುಲಾಂನಬಿ ಆಜಾದ್ ಬಂದಿದ್ದರು. ಶಿವಕುಮಾರ್ ಅಧ್ಯಕ್ಷರಾಗುವುದಕ್ಕೆ ಗುಲಾಂನಬಿ ವಿರೋಧ ಇದೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಮನೆಗೆ ಕರೆದು ಚರ್ಚೆ ನಡೆಸಿದ್ದಾರೆಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ. ಹೈಕಮಾಂಡ್​ನಲ್ಲಿ ತಮ್ಮ ಪರ ಅಭಿಪ್ರಾಯ ವ್ಯಕ್ತಪಡಿಸುವಂತೆ ಗುಲಾಂನಬಿ ಬಳಿ ಡಿಕೆಶಿ ಮನವಿ ಮಾಡಿದರೆಂದು ಮೂಲಗಳು ಖಚಿತಪಡಿಸಿವೆ.

ಸಿದ್ದು ನಡೆ ಬಗ್ಗೆ ಚರ್ಚೆ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಪಟ್ಟು ಹಿಡಿದಿರುವುದು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಹೋಗಿ ಬಂದ ಬಗ್ಗೆಯೂ ಶಿವಕುಮಾರ್ ಅವರು ಗುಲಾಂನಬಿ ಬಳಿ ಚರ್ಚೆ ನಡೆಸಿದರೆಂದು ಹೇಳಲಾಗಿದೆ. ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮಕ್ಕೆ ಹೋಗಿ ಬಂದರೆ ಯಾವ ಸಂದೇಶ ನೀಡಲು ಸಾಧ್ಯವೆಂದು ಡಿಕೆಶಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net