ಕೆ.ಪಿ. ರಾಜು, ಪ್ರಭಾಕರ್ ರೆಡ್ಡಿ ಜೆಡಿಎಸ್ ಅಭ್ಯರ್ಥಿಗಳು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಣೆ

24 anekal kp raju
Published on

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ಕೆ.ಪಿ.ರಾಜು ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪ್ರಭಾಕರ್ ರೆಡ್ಡಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಭಾನುವಾರ ಆನೇಕಲ್​ನ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್ ಜತೆಗೆ ಮೈತ್ರಿಮಾಡಿಕೊಂಡು, ಅವುಗಳ ನೀಚ ಬುದ್ಧಿ ಏನೆಂಬುದು ಅರಿವಾಗಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದ್ದೇವೆ ಎಂದರು.

ಜೆಡಿಎಸ್ ಸದ್ಯ ಅಧಿಕಾರದಲ್ಲಿ ಇಲ್ಲ. ಆದರೂ ಆನೇಕಲ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ಅಭ್ಯರ್ಥಿ ಪರ ಬೆಂಬಲಕ್ಕೆ ನಿಂತಿದ್ದಾರೆ. ಇವರ ಉತ್ಸಾಹ ರಾಜ್ಯದ ಎಲ್ಲ ಕ್ಷೇತ್ರಗಳ ಕಾರ್ಯಕರ್ತರಲ್ಲಿ ಕಾಣಲಿ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ, ಗ್ರಾಪಂ ಸದಸ್ಯ ಸತೀಶ್, ಮುಖಂಡರಾದ ರವಿ, ಶ್ರೀರಾಮ್ ಮತ್ತಿತರರು ಇದ್ದರು.

ಆಡಳಿತ ಮಾಡಲು ಬರುತ್ತಿಲ್ಲ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಿಧಾನಸೌಧದಲ್ಲಿ ಇರುವವರಿಗೆ ಆಡಳಿತ ಮಾಡಲು ಬರುತ್ತಿಲ್ಲ, ಚುನಾವಣೆ ಬಂದಾಗ ಆಪರೇಷನ್ ಮಾಡಿ ಅನ್ಯ ಪಕ್ಷದವರನ್ನು ಸೆಳೆಯುತ್ತಾರೆ. ಬಿಜೆಪಿಯವರಿಗೆ ರೈತರ, ಬಡವರ, ಕೂಲಿ ಕಾರ್ವಿುಕರ ಬಗ್ಗೆ ಯಾವುದೇ ಅನುಕಂಪ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net