

ಶಿರಸಿ: ಸ್ಥಳೀಯ ಹಿಲ್ಲೂರು ಯಕ್ಷಮಿತ್ರ ಬಳಗದ ಮೂರನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ಗೌರವ ಸನ್ಮಾನ, ತಾಳಮದ್ದಲೆ, ಯಕ್ಷಗಾನ, ಭಾವ-ವಲ್ಲರಿ ಎಂಬ ಕಾರ್ಯಕ್ರಮಗಳನ್ನು ನಗರದ ಟಿಎಂಎಸ್ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಹಿಲ್ಲೂರು ಯಕ್ಷಮಿತ್ರ ಪ್ರಶಸ್ತಿಯನ್ನು ಯಕ್ಷಗಾನ ರಂಗದ ಹಿರಿಯ ಭಾಗವತ ಕೆ.ಪಿ. ಹೆಗಡೆ ಗೊಳಗೋಡ ಅವರಿಗೆ ಪ್ರದಾನ ಮಾಡಲಾಯಿತು.
ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಗೌರವ ಸಮ್ಮಾನ ನೆರವೇರಿಸಲಾಯಿತು. ಪ್ರೋತ್ಸಾಹಕ ಸಮ್ಮಾನವಾಗಿ ಗೋ ಸಂರಕ್ಷಕ ರವಿಚಂದ್ರ ಹನುಮಂತ ಗೌಳಿ ಮರಾಠಿಕೊಪ್ಪ ಅವರನ್ನು ಪುರಸ್ಕರಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ಮಧ್ಯಾಹ್ನ ಶಿರಸಿ ಲಯನ್ಸ್ ಶಾಲಾ ವಿದ್ಯಾರ್ಥಿಗಳಿಂದ ನಚಿಕೇತ ಎಂಬ ತಾಳಮದ್ದಲೆ ನಡೆಯಿತು. ಭಾಗವತರಾಗಿ ತುಳಗೇರಿ ಗಜಾನನ ಭಟ್ಟ ಹಾಗೂ ಮದ್ದಲೆ ವಾದನದಲ್ಲಿ ಅನಿರುದ್ಧ ವರ್ಗಾಸರ ಪಾಲ್ಗೊಂಡರು.
ಭಾವ-ವಲ್ಲರಿ ಕಾರ್ಯಕ್ರಮದಲ್ಲಿ ಬಹುಮುಖಿ ಕಲಾವಿದ ರವಿ ಮುರೂರು ಹಾಡು ಮೈಮನ ಮರೆಸಿತು. ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ಬೆಣ್ಣೆಮನೆ, ತಾಳದಲ್ಲಿ ಅನಂತಮೂರ್ತಿ ಮತ್ತಿಘಟ್ಟ ಸಹಕಾರ ನೀಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಕೀಲ ಜಿ.ಟಿ. ಹೆಗಡೆ ತಟ್ಟೀಸರ ಅಧ್ಯಕ್ಷತೆ ವಹಿಸಿದ್ದರು. ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಜಿ.ಭಾಗ್ವತ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಲಯನ್ಸ್ ಎಜುಕೇಶನ್ ಸೊಟೈಟಿ ಅಧ್ಯಕ್ಷ ಪ್ರಭಾಕರ ಹೆಗಡೆ, ಹಿಲ್ಲೂರು ರಾಮಕೃಷ್ಣ, ರಮ್ಯಾ ರಾಮಕೃಷ್ಣ, ನಾಗರಾಜ ಜೋಶಿ ಇತರರು ಇದ್ದರು. ಅಭಿನಂದನಾ ನುಡಿಯನ್ನು ಪ್ರಸಂಗಕರ್ತ ಪ್ರೋ. ಪವನ ಕಿರಣಕರೆ ಮಾಡಿದರು.
ಕವಿ ದೇವಿದಾಸ ರಚಿಸಿದ ಪೌರಾಣಿಕ ಪ್ರಸಂಗ ದಕ್ಷಯಜ್ಞ ಯಕ್ಷಗಾನ ಪ್ರದರ್ಶಿತಗೊಂಡಿತು. ಭಾಗವತರಾಗಿ ರವೀಂದ್ರ ಭಟ್ಟ ಅಚವೆ ಹಾಗೂ ರಾಮಕೃಷ್ಣ ಹೆಗಡೆ ಹಿಲ್ಲೂರ ಮತ್ತು ಮದ್ದಲೆ ವಾದನದಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಅನಿರುದ್ಧ ವರ್ಗಾಸರ, ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಲವಳ್ಳಿ ಪಾಲ್ಗೊಂಡರು.
ಮುಮ್ಮೇಳದ ಪಾತ್ರದಾರಿಗಳಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಸಿದ್ದಾಪುರ ಅಶೋಕ ಭಟ್ಟ, ಬಿಳಿಯೂರ ಸಂಜಯ, ಹೊಸಪಟ್ಟಣ ಚಂದ್ರಹಾಸ ಗೌಡ, ವೆಂಕಟೇಶ ಬೊಗ್ರಿಮಕ್ಕಿ, ಹಾಸ್ಯದಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ, ಸ್ತ್ರೀ ವೇಶದಲ್ಲಿ ಕೊಂಡದಕುಳಿ ಅಶ್ವಿನಿ ಮತ್ತು ದೀಪಕ ಕುಂಕಿ ಭಾಗವಹಿಸಿದರು.