ಕೋಳಿಕೆರೆ ಅಭಿವೃದ್ಧಿ ಕಗ್ಗಂಟು

7 Dwd 1
Published on

ಧಾರವಾಡ: ಧಾರವಾಡ 71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕಳೆದ 2 ವರ್ಷಗಳಲ್ಲಿ 350 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ನಗರದ 8 ವಾರ್ಡ್​ಗಳು ಸೇರಿ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಕಾಮಗಾರಿಗಳು ಚಾಲ್ತಿಯಲ್ಲಿವೆ. ಆದರೆ ಇಲ್ಲಿನ ವಾರ್ಡ್ ಸಂಖ್ಯೆ 9ರ ಕೋಳಿಕೆರೆ ಅಭಿವೃದ್ಧಿ ಕಾಮಗಾರಿ ನಿಂತು ಹೋಗಿದ್ದು, ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಮರೆತಂತಿದೆ.

ಕೋಳಿಕೆರೆಯನ್ನು ಅಭಿವೃದ್ಧಿಪಡಿಸಲು ಎಸ್​ಎಫ್​ಸಿ ಅಡಿ 3 ಕೋಟಿ ರೂ. ಹಾಗೂ ಅಮೃತ್ ಯೋಜನೆಯಡಿ 1.95 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಲೋಕಸಭೆ ಚುನಾವಣೆಗೂ ಮೊದಲು ಸಂಸದ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಭೂಮಿಪೂಜೆ ನೆರವೇರಿಸಿದ್ದರು. ಕೋಳಿಕೆರೆ ಸುತ್ತ ಗ್ರಿಲ್ ಅಳವಡಿಕೆ, ಚರಂಡಿ ನೀರು ಕೆರೆ ಸೇರದಂತೆ ನಾಲಾ ನಿರ್ವಣ, ಸುತ್ತಲಿನ ದಂಡೆಯ ಮೇಲೆ ವಾಕಿಂಗ್ ಪಾತ್, ತೆರೆದ ಜಿಮ್ ನಿರ್ವಣ, ಹಸಿರೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಇದೆ. 2 ವರ್ಷಗಳ ಹಿಂದೆ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿರುವ ಜನಪ್ರತಿನಿಧಿಗಳು, ಕಾಮಗಾರಿಯ ಮೇಲುಸ್ತುವಾರಿ ವಹಿಸಿಲ್ಲ. ಗುತ್ತಿಗೆದಾರ ಕೆಲಸವನ್ನು ಅರ್ಧಕ್ಕೆ ಕೈ ಬಿಟ್ಟಿದ್ದು, ಪಾಲಿಕೆ ಅಧಿಕಾರಿಗಳೂ ಹಿಂತಿರುಗಿ ನೋಡಿಲ್ಲ.

ಅನುದಾನ ಶಿಫ್ಟ್​ಗೆ ಯತ್ನ: ಕೋಳಿಕೆರೆ ಅಭಿವೃದ್ಧಿಗಾಗಿ ಅಮೃತ್ ಯೋಜನೆಯಡಿ ಬಿಡುಗೆಯಾದ 1.95 ಕೋಟಿ ರೂ.ಗಳನ್ನು ಗ್ರಾಮೀಣ ಕ್ಷೇತ್ರದಿಂದ ಪಶ್ಚಿಮ ಕ್ಷೇತ್ರಕ್ಕೆ ಸ್ಥಳಾಂತರಿಸುವ ಯತ್ನ ನಡೆದಿತ್ತು. ಆ ಹಣವನ್ನು ಕೆಲಗೇರಿ ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಶಾಸಕ ಅರವಿಂದ ಬೆಲ್ಲದ ಯತ್ನಿಸಿದ್ದರು. ಆದರೆ ಅವರದೇ ಪಕ್ಷದ ಪಾಲಿಕೆ ಸದಸ್ಯ ಶಂಕರ ಶೆಳಕೆ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುದಾನದ ವರ್ಗಾವಣೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾಧನಕೇರಿ ರೀತಿ ಅಭಿವೃದ್ಧಿ?: ಕೋಳಿಕೆರೆಯನ್ನು ಐತಿಹಾಸಿಕ ಸಾಧನಕೆರೆಯ ರೀತಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಆದರೆ ಧಾರವಾಡದ ಅರ್ಧ ಭಾಗದ ಚರಂಡಿ ನೀರು ಕೋಳಿಕೆರೆಗೆ ಸೇರುತ್ತದೆ. ಇದನ್ನು ತಡೆಯಲು ನಾಲಾ ನಿರ್ವಿುಸಲಾಗುತ್ತಿದ್ದು, ಆ ಕಾಮಗಾರಿಯೂ ಅರೆಬರೆಯಾಗಿದೆ. ಚರಂಡಿ ನೀರು ಕೆರೆ ಸೇರದೆ ಮುಂದಕ್ಕೆ ಸಾಗಿಸಿದರೆ ಸೋಮಾಪುರ, ಹೆಬ್ಬಳ್ಳಿ ಫಾಮ್ರ್, ಗೋವನಕೊಪ್ಪದ ರೈತರು ನೀರಾವರಿಗೆ ಬಳಸಿಕೊಳ್ಳಬಹುದು.

ಕೋಳಿಕೆರೆ ಅಭಿವೃದ್ಧಿಗಾಗಿ ಕಳೆದ 8 ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಶಾಸಕರು ವಿವಿಧ ಯೋಜನೆಗಳ ಅಡಿ ಕಾಮಗಾರಿ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಕೆಲಸ ಸಂಪೂರ್ಣ ನಿಂತು ಹೋಗಿದೆ. ಪ್ರವಾಸಿ ತಾಣ ಮಾಡುವ ಭರವಸೆ ಕೇವಲ ಕನಸಾಗದೆ ನನಸಾಗಬೇಕು.- ಬಸವರಾಜ ಜಾಧವ, ವಾರ್ಡ್ 9ರ ನಿವಾಸಿ

ಕೋಳಿಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಕೆಲ ತಿಂಗಳು ಕಾಣೆಯಾಗಿದ್ದರು. ಅವರು 5- 6 ಕಡೆ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದರಿಂದ ಇಲ್ಲಿನ ಕೆಲಸ ವಿಳಂಬವಾಗಿದೆ. ಅನುದಾನದ ಕೊರತೆಯೂ ಕಾಮಗಾರಿ ಕುಂಠಿತಕ್ಕೆ ಕಾರಣ.- ಮಹೇಶ ಶಾಸ್ತ್ರಿ, ವಲಯ 2ರ ಸಹಾಯಕ ಆಯುಕ್ತ,

ಕೋಳಿಕೆರೆ ಸುತ್ತ ಅತಿಕ್ರಮಣವಾಗಿದೆ. ಜೊತೆಗೆ ಕರೊನಾ ಹಾಗೂ ಮಳೆಗಾಲದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಕೆರೆ ಪ್ರದೇಶದಲ್ಲಿ 17 ಮನೆಯವರು ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಲಾಗಿದೆ. ತೆರವು ಕಾರ್ಯಾಚರಣೆ ನಂತರ ಕೆರೆ ಒಡ್ಡು ನಿರ್ಮಾಣ ಹಾಗೂ ವಾಕಿಂಗ್ ಪಾತ್ ನಿರ್ವಣವಾಗಲಿದೆ.- ಶಂಕರ ಶೆಳಕೆ , ವಾರ್ಡ್ 9ರ ಮಾಜಿ ಕಾಪೋರೇಟರ್

ಶಾಸಕರು ಗುದ್ದಲಿ ಪೂಜೆ ನೆರೆವೇರಿಸಿದ ನಂತರ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಬೇಕು. ಆದರೆ 2 ವರ್ಷಗಳಿಂದ ನಡೆಯುತ್ತಿರುವ ಕೆಲಸದತ್ತ ತಿರುಗಿಯೂ ನೋಡಿಲ್ಲ. ಪಾಲಿಕೆ ಸದಸ್ಯರೂ ಬಿಜೆಪಿಯವರೇ ಆಗಿದ್ದರು. ಅವರದೇ ಆಡಳಿತ ಇದ್ದರೂ ಕೋಳಿಕೆರೆ ಅಭಿವೃದ್ಧಿ ಕಂಡಿಲ್ಲ. ಇನ್ನು ಪಾಲಿಕೆ ಅಧಿಕಾರಿಗಳು ಒಮ್ಮೆಯೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ.- ಆನಂದ ಸಿಂಗನಾಥ, ವಾರ್ಡ್ 9ರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net