

ಪವನ ದೇಶಪಾಂಡೆ ಕೊಡೇಕಲ್: ದಿನೇದಿನೆ ಹೆಚ್ಚುತ್ತಿರುವ ವಾಹನಗಳ ಓಡಾಟ ಮತ್ತು ಸಂಚಾರ ನಿಮಯ ಪಾಲನೆಯಾಗದ ಕಾರಣ ಟ್ರಾಫಿಕ್ ಸಮಸ್ಯೆಯಿಂದ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಹ ಸ್ಥಿತಿ ಕೊಡೇಕಲ್‌ನಲ್ಲಿ ನಿರ್ಮಾಣವಾಗಿದೆ.
ರಾಜ್ಯ ಹೆದ್ದಾರಿ ನಾರಾಯಣಪುರ, ಹುಣಸಗಿ ಮತ್ತು ತಾಳಿಕೋಟೆಗೆ ಸಂಪರ್ಕ ರಸ್ತೆ ಇದಾಗಿದ್ದರಿಂದ ಪ್ರತಿದಿನ ಸಾವಿರಾರು ಭಾರಿ ಮತ್ತು ಲಘು ವಾಹನಗಳು ಓಡಾಡುತ್ತಿವೆ. ಆದರೆ ಕಟ್ಟುನಿಟ್ಟಾಗಿ ಸಂಚಾರ ನಿಯಮ ಜಾರಿಯಾಗದ ಕಾರಣ ಸಮಸ್ಯೆ ತೀವ್ರವಾಗಿದೆ.
ಪ್ರತಿ ಮಂಗಳವಾರ ವಾರದ ಸಂತೆಗೆ ವಿವಿಧ ಗ್ರಾಮಗಳ ಜನತೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಇದರಿಂದ ಬಸ್ ಇತರ ವಾಹನಗಳ ಸುಗಮ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಕೆಲವೊಮ್ಮೆ ಆಂಬುಲೆನ್ಸ್ ಸಹ ಟ್ರಾಫಿಕ್‌ನಲ್ಲಿ ಸಿಲುಕಿ ರೋಗಿಗಳು ಒದ್ದಾಡಿದ ಪ್ರಸಂಗವೂ ನಡೆದಿದೆ.
ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ಮೌನವಾಗಿರುವುದು ಸಂಚಾರ ಸಮಸ್ಯೆ ಹೇಗೆ ಪರಿಹಾರ ಕಾಣಲಿದೆ ಎಂಬ ಬಹುದೊಡ್ಡ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದೆಲ್ಲದರ ಮಧ್ಯೆ ಗಸ್ತು ಮತ್ತು ಪಿಎಸ್‌ಐ ವಾಹನ ಸಹ ಆಗಾಗ್ಗೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿವೆ. ಆದರೆ ಪೊಲೀಸರು ಮಾತ್ರ ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂಬAತೆ ವರ್ತಿಸುತ್ತಿದ್ದಾರೆ. ಈ ವಿಷಯದಲ್ಲಿ ಸಾರ್ವಜನಿಕರು ಕೂಡ ಸಂಚಾರ ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಜರೂರಿಯಾಗಿದೆ.
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದ್ದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವತ್ತ ದಿಟ್ಟ ಹೆಜ್ಜೆ ಇಡುವ ಅಗತ್ಯವಿದೆ.
ಸಂಚಾರ ನಿಯಮ ಪಾಲನೆ ಮಾಡದೆ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗುತ್ತಿದ್ದು, ಕೂಡಲೇ ಇಂತಹ ವಾಹನಗಳತ್ತ ಪೊಲೀಸ್ ಇಲಾಖೆ ನಿಗಾ ವಹಿಸಿ ದಂಡ ವಿಧಿಸುವ ಮೂಲಕ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ಅಗತ್ಯವಿದೆ.
| ಸೋಮಲಿಂಗಪ್ಪ ದೊರಿ ಗ್ರಾಪಂ ಮಾಜಿ ಸದಸ್ಯ ಕೊಡೇಕಲ್