ಅಯೋಮಯ ಸ್ಥಿತಿಯಲ್ಲಿದೆ ಕೊಯ್ಕೂರು ರಸ್ತೆ, ವಾಹನ ಸಂಚಾರಕ್ಕೆ ದುರ್ಗಮ ಹಾದಿ

koykoor
Published on

ಕೋಟ: ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ತೆಕ್ಕಟ್ಟೆಯ ಕೆದೂರು, ಬೇಳೂರು ಗ್ರಾಮಗಳನ್ನು ಸಂಪರ್ಕಿಸುವ ಕೊಯ್ಕೂರು ಗುಳ್ಳಾಡಿ ರಸ್ತೆಯಲ್ಲಿ ವಾಹನ ಸಂಚಾರ ದುರ್ಗಮವೆನಿಸಿದೆ.

ಈ ರಸ್ತೆಯುದ್ದಕ್ಕೂ ಹೊಂಡಗಳು ಎದ್ದು ವಾಹನ ಸಂಚಾರ ವೇಳೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆರಂಭದಲ್ಲಿ ಡಾಂಬರು, ಬಳಿಕ ಸ್ವಲ್ಪ ದೂರ ಕಾಂಕ್ರೀಟ್ ರಸ್ತೆಯಿದೆ. ಆ ಬಳಿಕದ ಮೂರು ಕಿ.ಮೀ. ರಸ್ತೆಯಲ್ಲಿ ಹೊಂಡಗುಂಡಿಯೇ ಜಾಸ್ತಿಯಿದೆ. ಕೊಯ್ಕೂರು ರಸ್ತೆ ಹಲವು ಊರುಗಳನ್ನು ಸಂಪರ್ಕಿಸುತ್ತದೆ. ತೆಕ್ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಯಾಡಿ, ಕೇದೂರು, ದರ್ಬೆಕಟ್ಟೆ ಮೂಲಕ ಹಾಲಾಡಿ ತಲುಪಲು ಇದು ಹತ್ತಿರದ ರಸ್ತೆ. ಕೋಟ, ಸಾಲಿಗ್ರಾಮ, ಸಾಸ್ತಾನ ಭಾಗದ ಜನರಿಗೆ ಶಾಸಕರ ಮನೆ ತಲುಪಲೂ ಇದು ಸನಿಹದ ದಾರಿ. ಇತ್ತ ಬೇಳೂರು ಗ್ರಾಮದ ಮೂಲಕ ಶಿರಿಯಾರ ತಲುಪಬಹುದು.

ವಿಸ್ತರಣೆಗೊಳ್ಳದ ರಸ್ತೆ: ಈ ರಸ್ತೆ ಹಲವಾರು ವರ್ಷಗಳಿಂದ ಇದ್ದರೂ ವಿಸ್ತರಣೆ ಆಗಿಯೇ ಇಲ್ಲ. ಎದುರಿನಿಂದ ಬರುವ ವಾಹನಕ್ಕೆ ಬದಿ ನೀಡಲೂ ಇದರಲ್ಲಿ ಕಷ್ಟ. ಚರಂಡಿ ಇಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿರುತ್ತದೆ.

2016ರಲ್ಲಿ ಕೋಟ ಪಂಚಾಯಿತಿಗೆ ಪತ್ರ ಬರೆದು ರಸ್ತೆ ರಿಪೇರಿ ಬಗ್ಗೆ ಮನವಿ ಸಲ್ಲಿಸಿದ್ದೆ. ಅದಾದ ನಂತರ 300 ಮೀ. ರಸ್ತೆ ಕಾಮಗಾರಿ ಆದರೂ ಪುನಃ ರಸ್ತೆ ಅದ್ವಾನ. ಈ ಬಗ್ಗೆಯೂ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೆ. ಆರು ವರ್ಷಗಳಿಂದ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಿಲ್ಲ. ಆದಷ್ಟು ಬೇಗ ಈ ರಸ್ತೆ ದುರಸ್ತಿಯಾಗಬೇಕು. - ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಉಡುಪಿ ಜಿಲ್ಲಾ ಅಧ್ಯಕ್ಷ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ರಾಜಲಕ್ಷ್ಮಿಸಭಾಂಗಣದಿಂದ ಕೊಯ್ಕೂರು ಗುಳ್ಳಾಡಿ ಸಂಪರ್ಕಿಸುವ ರಸ್ತೆಗೆ ಈಗಾಗಲೇ ಪ್ರಕೃತಿ ವಿಕೋಪದಡಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯಿಂದ 20 ಲಕ್ಷ ರೂ.ಅನುದಾನ ಕಾಯ್ದಿರಿಸಿದ್ದೇವೆ. ಸದ್ಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. - ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net